ADVERTISEMENT

ಸಿಂಧನೂರು: ರೆಮ್‍ಡಿಸಿವಿರ್‌ಗಾಗಿ ಅಧ್ಯಕ್ಷ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 4:13 IST
Last Updated 3 ಮೇ 2021, 4:13 IST
ಸಿಂಧನೂರಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಪ್ರತಿಭಟನೆ ನಡೆಸಿದರು
ಸಿಂಧನೂರಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಪ್ರತಿಭಟನೆ ನಡೆಸಿದರು   

ಸಿಂಧನೂರು: ‘ಕೊರೊನಾ ಸೋಂಕು ದೃಢಪಟ್ಟ ಕಾರಣ ನನಗೆ ರೆಮ್‍ಡಿಸಿವಿರ್ ಚುಚ್ಚುಮದ್ದಿನ ಅವಶ್ಯಕತೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಚುಚ್ಚುಮದ್ದು ನೀಡುತ್ತಿಲ್ಲ’ ಎಂದು ಆರೋಪಿಸಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎದುರು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಭಾನುವಾರ ಪ್ರತಿಭಟನೆ ನಡೆಸಿದರು.

‘ನಗರದ ಪ್ರಥಮ ಪ್ರಜೆಯಾದ ನನಗೇ ವೈದ್ಯರು ನಿಗದಿತ ಸಮಯಕ್ಕೆ ಚುಚ್ಚುಮದ್ದು ಕೊಟ್ಟಿಲ್ಲ. ಇನ್ನು ಸಾಮಾನ್ಯರ ಪರಿಸ್ಥಿತಿ ಏನು. ಸರ್ಕಾರಿ ಆಸ್ಪತ್ರೆ ಕೊಂಡವಾಡದಂತಾಗಿದೆ. ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಬಂದ ಮುಖ್ಯವೈದ್ಯಾಧಿಕಾರಿ ಹನುಮಂತ ರೆಡ್ಡಿ,‘ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಯಚೂರಿನಲ್ಲಿ ಸಿಬ್ಬಂದಿ ಕೈಗೆ ರೆಮ್‌ಡಿಸಿವಿರ್‌ ಕೊಟ್ಟಿದ್ದು, ಇನ್ನು ಮೂರು ತಾಸಿನೊಳಗಾಗಿ ದೊರೆಯಲಿದೆ’ ಎಂದು ಮಲ್ಲಿಕಾರ್ಜುನ ಪಾಟೀಲರಿಗೆ ಭರವಸೆ ನೀಡಿ ಪ್ರತಿಭಟನೆ ಹಿಂತೆಗೆದುಕೊಳ್ಳವಂತೆ ಮನವೊಲಿಸಿದರು.

ADVERTISEMENT

ಶಾಸಕರ ಮನವಿ: ಶಾಸಕ ವೆಂಕಟರಾವ್ ನಾಡಗೌಡ ಅವರು ದೂರವಾಣಿ ಮೂಲಕ ಮಲ್ಲಿಕಾರ್ಜುನ ಪಾಟೀಲ ಜತೆಗೆ ಮಾತನಾಡಿ ‘ಅತೀ ಶೀಘ್ರದಲ್ಲಿ ಚುಚ್ಚುಮದ್ದು ಬರುತ್ತದೆ. ದಯವಿಟ್ಟು ಪ್ರತಿಭಟನೆ ಹಿಂತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಎಚ್‌.ಬಾಷಾ, ಮುನೀರ್‌ ಪಾಷಾ, ಶರಣಪ್ಪ ಉಪ್ಪಲದೊಡ್ಡಿ, ಆಲಂಸಾಬ, ಮುಖಂಡರಾದ ಕರೀಮ್‍ಸಾಬ, ಸಣ್ಣತಿಮ್ಮಯ್ಯ ಭಂಗಿ, ವೆಂಕಟೇಶ ಬಂಡಿ ವಕೀಲ, ಅಮ್ಜದ್‍ಖಾನ್, ಉಮೇಶ ಗೋಮರ್ಸಿ ಹಾಗೂ ನನ್ನುಮೇಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.