ADVERTISEMENT

ರಾಜ್ಯದಲ್ಲೆಡೆ ಕೈಗಾರಿಕೆ ಸ್ಥಾಪನೆಗೆ ಆದ್ಯತೆ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 15:02 IST
Last Updated 1 ಸೆಪ್ಟೆಂಬರ್ 2020, 15:02 IST
ರಾಯಚೂರಿನಲ್ಲಿ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ರಾಯಚೂರು ಕಾರ್ಖಾನೆಗಳ ಮಾಲೀಕರ ಒಕ್ಕೂಟದಿಂದ ಮಂಗಳವಾರ ಮನವಿ ಸಲ್ಲಿಸಿ, ಸ್ಮರಣಿಕೆಯೊಂದನ್ನು ನೀಡಿದರು
ರಾಯಚೂರಿನಲ್ಲಿ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ರಾಯಚೂರು ಕಾರ್ಖಾನೆಗಳ ಮಾಲೀಕರ ಒಕ್ಕೂಟದಿಂದ ಮಂಗಳವಾರ ಮನವಿ ಸಲ್ಲಿಸಿ, ಸ್ಮರಣಿಕೆಯೊಂದನ್ನು ನೀಡಿದರು   

ರಾಯಚೂರು: ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಬೆಂಗಳೂರು ಕೇಂದ್ರಿತ ವ್ಯವಸ್ಥೆಯಿಂದ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳ ಬೆಳವಣಿಗೆಗೆ ಗಮನ ಹರಿಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ನಿಧನ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಪೂರ್ವ ನಿಗದಿತ ಸಭೆ ರದ್ದುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಭೇಟಿ ನೀಡಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಕಲಬುರ್ಗಿಯಲ್ಲಿ ಹೂಡಿಕೆದಾರರ ಸಮ್ಮೇಳನ ಆಯೋಜಿಸಲಾಗುವುದು. ಕಳೆದ 10 ತಿಂಗಳ ಹಿಂದಿನಿಂದಲೂ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗಾಗಿ ಅವಿರತ ಶ್ರಮಹಾಕಲಾಗಿದೆ. ಹುಬ್ಬಳ್ಳಿಯಲ್ಲಿ ‘ಇನ್‍ವೆಸ್ಟ್ ಕರ್ನಾಟಕ’ ಕಾರ್ಯಕ್ರಮ ಮಾಡಿ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲಾಯಿತು. ಆನಂತರ ಕೊರೊನಾ ಸೋಂಕು ಹರಡಿದ್ದರಿಂದ ಸ್ಪಲ್ಪಮಟ್ಟಿನ ಹಿನ್ನಡೆ ಅನುಭವಿಸುವಂತಾಯಿತು ಎಂದರು.

ADVERTISEMENT

ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರ್ಗಿಯಲ್ಲಿ ಕೈಗಾರಿಕೋದ್ಯಮಿಗಳ ಸಭೆ ಹಾಗೂ ರೋಡ್ ಶೋ ಹಮ್ಮಿಕೊಳ್ಳಲಾಗುವುದು. ಕೊಪ್ಪಳದಲ್ಲಿ ಆಟಿಕೆ ಕೈಗಾರಿಕೆಗಳ ಸ್ಥಾಪನೆಗೆ 400 ಎಕರೆ ಜಾಗವನ್ನು ಕಂಪೆನಿಗಳು ಪಡೆದಿವೆ. ಅಕ್ಟೋಬರ್‌ನಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿಪೂಜೆ ನಡೆಸಲಾಗುತ್ತದೆ. ಇದು ಒಂದು ವರ್ಷದೊಳಗಾಗಿ ಕಾರ್ಯಾರಂಭ ಮಾಡಲಿದ್ದು, ₹ 2 ಸಾವಿರ ಕೋಟಿವರೆಗೂ ಬಂಡವಾಳ ಹೂಡಿಕೆಯಾಗಲಿದೆ. 40 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಕೈಗಾರಿಕೆಗಳ ಆರಂಭಕ್ಕೆ ಇಲಾಖೆಯಲ್ಲಿ ಸರಳೀಕರಣ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸೌಕರ್ಯಗಳಿಗೆ ಕೋರಿದ ಕೂಡಲೇ ಅನುಮತಿ ನೀಡುವ ವ್ಯವಸ್ಥೆ ಆರಂಭವಾಗಿದೆ. ಹೊಸ ಕಾನೂನು ಪ್ರಕಾರ, ರಾಜ್ಯಮಟ್ಟದಲ್ಲಿ ಕೈಗಾರಿಕೆಗೆ ಅನುಮೋದನೆ ಮಾಡಿದ ತಕ್ಷಣ ಕಟ್ಟಡ ಕಾಮಗಾರಿ ಆರಂಭಿಸಬಹುದು. ಎನ್‌ಎ ಸರಳೀಕರಣ ಆಗಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿದ್ದು, 79 ಎ, ಬಿ ತೆಗೆಯಲಾಗಿದೆ ಎಂದು ಹೇಳಿದರು.

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ನಿಧನಕ್ಕೆ ಆರಂಭದಲ್ಲಿಯೇ ಸಂತಾಪ ಸೂಚಿಸಿದ ಅವರು, ಪ್ರಣವ್‌ ಮುಖರ್ಜಿ ಅವರು ಅತ್ಯುತ್ತಮ ರಾಜಕಾರಣಿಯಾಗಿದ್ದರು. ಪ್ರಧಾನಿ ಆಗುವ ಅರ್ಹತೆ ಅವರಲ್ಲಿದ್ದವು ಎಂದು ನೆನೆದರು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.