ADVERTISEMENT

ಮುದಗಲ್: ಖಾಸಗಿ ಘಟಕಗಳ ನೀರಿನ ವ್ಯಾಪಾರ ಜೋರು

ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತ: ಸೂಕ್ತ ನಿರ್ವಹಣೆಗೆ ಆಗ್ರಹ

ಡಾ.ಶರಣಪ್ಪ ಆನೆಹೊಸೂರು
Published 16 ಜುಲೈ 2025, 6:29 IST
Last Updated 16 ಜುಲೈ 2025, 6:29 IST
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಟಾಟಾ ಏಸ್ ವಾಹನಕ್ಕೆ ನೀರಿನ ಟ್ಯಾಂಕ್ ಅಳವಡಿಸಿ ಮನೆ ಮನೆಗೆ ನೀರು ಸರಬರಾಜು ಮಾಡುತ್ತಿರುವುದು
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಟಾಟಾ ಏಸ್ ವಾಹನಕ್ಕೆ ನೀರಿನ ಟ್ಯಾಂಕ್ ಅಳವಡಿಸಿ ಮನೆ ಮನೆಗೆ ನೀರು ಸರಬರಾಜು ಮಾಡುತ್ತಿರುವುದು   

ಮುದಗಲ್: ಸರ್ಕಾರದ ನಿರ್ಲಕ್ಷ್ಯದಿಂದಾಗಿ ಪಟ್ಟಣ ಸುತ್ತಲಿನ ಕೆಲ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯ ಕೊರತೆ ಅನುಭವಿಸುತ್ತಿದ್ದರಿಂದ ಖಾಸಗಿ ಆರ್.ಒ ಪ್ಲಾಂಟ್‌ಗಳಲ್ಲಿ ನೀರಿನ ವ್ಯಾಪಾರ ಜೋರಾಗಿದೆ.

ಜನರಿಗೆ ಪ್ಲೋರೈಡ್‌ ಮುಕ್ತ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಈ ಹಿಂದೆ ರಾಜ್ಯ ಸರ್ಕಾರ ₹2ಗೆ 25 ಲೀಟರ್‌ ನೀರು ಪೂರೈಸುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿದೆ. ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಮಪಕ ನಿರ್ವಹಣೆ ಕೊರತೆಯಿಂದ ಮುದಗಲ್ ಹೋಬಳಿಯ ಬಹುತೇಕ ಆರ್.ಒ ಪ್ಲಾಂಟ್‌ಗಳು ಸ್ಥಗಿತಗೊಂಡಿವೆ.

ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಜನರು ₹10ಗೆ 25 ಲೀಟರ್ ಶುದ್ಧ ನೀರನ್ನು ಖಾಸಗಿ ಆರ್.ಒ ಪ್ಲಾಂಟ್‌ಗಳಲ್ಲಿ ತರುವಂತಾಗಿದೆ.

ADVERTISEMENT

ಮುದಗಲ್, ನಾಗರಾಳ, ಆನೆಹೊಸೂರು ಸೇರಿದಂತೆ ಇನ್ನಿತರ ಕಡೆ ಖಾಸಗಿ ವ್ಯಕ್ತಿಗಳು ಟಾಟಾ ಏಸ್ ವಾಹನಕ್ಕೆ ನೀರಿನ ಟ್ಯಾಂಕ್ ಅಳವಡಿಸಿ, ತಮ್ಮ ಆರ್.ಒ ಪ್ಲಾಂಟ್‌ನಿಂದ ಶುದ್ಧ ನೀರು ತುಂಬಿಕೊಂಡು ಮನೆ ಮನೆಗೆ ತಲುಸುತ್ತಿದ್ದಾರೆ. ಮುದಗಲ್ ಹೋಬಳಿಯ ಕೆಲ ಗ್ರಾಮಗಳಲ್ಲಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಗ್ರಾಮೀಣ ಜನ  ನಲ್ಲಿಯ ನೀರು, ಇಲ್ಲವೇ ಕೊಳವೇ ಬಾವಿಯ ನೀರಿನ್ನೇ ಕುಡಿಯಬೇಕಿದೆ. ಇದರಿಂದ ಆರೋಗ್ಯದ ಸಮಸ್ಯೆಯಾಗುತ್ತಿದೆ.

ಹೋಬಳಿಯಲ್ಲಿ ಕನ್ನಾಪುರಹಟ್ಟಿ, ಪಿಕ್ಕಳಿಹಾಳ, ಆಶಿಹಾಳ, ಆಶಿಹಾಳ ತಾಂಡಾ, ಕನ್ನಾಪುರ ಹಟ್ಟಿ ಸೇರಿದಂತೆ ಇನ್ನಿತರ ಕಡೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯ ಕಾರ್ಯನಿರ್ವಹಣೆಯೇ ಒಂದು ದೊಡ್ಡ ಉದಾಹರಣೆ.

ಗ್ರಾಮೀಣ ಪ್ರದೇಶದವರೆಗೂ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವೊಂದಕ್ಕೆ ಸರಿಯಾದ ವಿದ್ಯುತ್ ಪೂರೈಕೆ ಇಲ್ಲ, ಕೆಲವೊಂದಕ್ಕೆ ಬಿಡಿಭಾಗಗಳ ಕೊರತೆ, ಕೆಲವು ಘಟಕಗಳು ರಿಪೇರಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜನರು ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಪರಿತಪಿಸುತ್ತಿದ್ದಾರೆ.

ಮುದಗಲ್ ಸಮೀಪದ ಕನ್ನಾಪುರ ಹಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪಾಳು ಬಿದ್ದಿದೆ
ಗ್ರಾಮೀಣ ಭಾಗದಲ್ಲಿ ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳನ್ನು ಮತ್ತೆ ಪ್ರಾರಂಭಿಸಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು 
-ಬಸವರಾಜ ಬಂಕದಮನಿ ಸ್ಥಳೀಯರು
ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ ತಿಳಿದುಕೊಂಡು ಸಮಸ್ಯೆ ಸರಿ ಪಡಿಸುತ್ತೇನೆ
-ಖಾಜಾಬೇಗಂ ಪಿಡಿಒ ಉಪ್ಪಾರ ನಂದಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.