ADVERTISEMENT

ರಸಗೊಬ್ಬರ ಕೃತಕ ಅಭಾವಕ್ಕೆ ಕಡಿವಾಣ ಹಾಕಿ

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ: ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:17 IST
Last Updated 2 ಆಗಸ್ಟ್ 2022, 2:17 IST
ಲಿಂಗಸುಗೂರಿನಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಲಿಂಗಸುಗೂರಿನಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಲಿಂಗಸುಗೂರು: ರಸಗೊಬ್ಬರದ ಕೃತಕ ಅಭಾವಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ರೈತರು, ಉತ್ತಮ ಫಸಲು ನಿರೀಕ್ಷೆಯಲ್ಲಿರುವಾಗಲೇ ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಎದುರಾಗಿದೆ. ಹಿಂಗಾರು ಬಿತ್ತನೆಗೂ ಸಿದ್ಧತೆಗಳು ನಡೆಯುತ್ತಿವೆ. ರೈತರ ಬೇಡಿಕೆಗೆ ಅಗತ್ಯ ಇರುವಷ್ಟು ಬೀಜ, ಗೊಬ್ಬರ ದಾಸ್ತಾನು ಇಲ್ಲ. ಹೀಗಾಗಿ ರೈತರು ಪರದಾಡುವಂತಾಗಿದೆ ಎಂದು ಗಮನ ಸೆಳೆದರು.

ಬಗರಹುಕುಂ ಸಾಗುವಳಿದಾರರು ಮತ್ತು ಅರಣ್ಯ ಇಲಾಖೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ಆದೇಶ ನೀಡಬೇಕು. ಪಹಣಿ ಪತ್ರಿಕೆಯ ಕಬ್ಜಾ ಮತ್ತು ಸಾಗುವಳಿ ಕಾಲಂನಲ್ಲಿ ಸರ್ಕಾರ ಎಂದು ಬರುತ್ತಿದ್ದು ಇದರಿಂದ ರೈತರು ಪರದಾಡುವಂತಾಗಿದೆ. ಕೂಡಲೇ ತಾಂತ್ರಿಕ ತೊಂದರೆ ಸರಿಪಡಿಸಲು ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಬ್ಯಾಂಕ್‍ಗಳಲ್ಲಿ ರೈತರು ಬೆಳೆ ಸಾಲ ಪಡೆಯಲು ಪರದಾಡುವಂತಾಗಿದ್ದು, ಕೂಡಲೇ ಅಧಿಕಾರಿಗಳ ಸಭೆ ಕರೆದು ಸಾಲ ಸೌಲಭ್ಯ ನೀಡಲು ಇರುವ ನಿಯಮಗಳನ್ನು ಸರಳೀಕರ ಣಗೊಳಿಸಬೇಕು. ಸಮರ್ಪಕ ವಿದ್ಯುತ್‍ ಪೂರೈಕೆ, ಸರ್ವೆ ಇಲಾಖೆಯಲ್ಲಿನ ಅರ್ಜಿಗಳ ವಿಲೇವಾರಿ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಮುಖಂಡರಾದ ಅಮರಣ್ಣ ಗುಡಿಹಾಳ, ಮಲ್ಲನಗೌಡ ಗೌಡೂರು, ನಿಂಗಪ್ಪ, ತಿಪ್ಪಣ್ಣ ಪೂಜಾರಿ, ಅಮರೇಗೌಡ, ಹನುಮಂತ, ದುರುಗಪ್ಪ, ಹೊಳಿಯಪ್ಪ, ಹುಸೇನ ನಾಯಕ, ಕಾಶಿಂಸಾಬ, ಶಂಭುನಾಥ ತವಗ, ಅಮರೇಶ, ರಾಮಲಿಂಗಪ್ಪ, ಮಾನಪ್ಪ, ಹನುಮಂತ, ಮಲ್ಲಮ್ಮ ಹಾಗೂ ದುರುಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.