ರಾಯಚೂರು: ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಸತಿ ಶಾಲೆಗಳ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಆಡಳಿತ ಕಚೇರಿವರೆಗೂ ಮೌನ ಪ್ರತಿಭಟನೆ ಮೆರವಣಿಗೆ ಮಾಡಿದರು.
ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ‘ಶಾಲಾ ಶಿಕ್ಷಣ ಇಲಾಖೆ ಮತ್ತು ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಗಳ ಶಿಕ್ಷಕರಿಗೆ ಸಿಗುವ ಸೌಲಭ್ಯಗಳು ವಸತಿ ಶಾಲಾ ನೌಕರರಿಗೆ ಸಿಗುತ್ತಿಲ್ಲ. 13 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ, ಕಡಿಮೆ ವೇತನ ಇದೆ. ಶಾಲಾ ವಸತಿ ಗೃಹದಲ್ಲಿಯೇ ವಾಸವಾಗಿದ್ದೇವೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಸಂಜೆ ವಿಶೇಷ ತರಗತಿ ತೆಗೆದುಕೊಳ್ಳುವ ವ್ಯವಸ್ಥೆಯೂ ಇದೆ. ಆದರೆ, ಜ್ಯೋತಿ ಸಂಜೀವಿನಿಯಾಗಲಿ, ಹೆಚ್ಚುವರಿ ಭತ್ಯೆಯಾಗಲಿ ಇಲ್ಲದಿರುವುದು ಶೋಚನೀಯ‘ ಎಂದು ದೂರಿದರು.
‘ವಸತಿ ಶಾಲೆಗಳಲ್ಲಿ ಕೆಲಸ ಮಾಡತ್ತಿರುವ ನೌಕರರಿಗೆ ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯಗಳನ್ನು ಒದಗಿಸಬೇಕು. ಮನೆ ಬಾಡಿಗೆ ಕಡಿತದಿಂದ ವಿನಾಯಿತಿ ನೀಡಬೇಕು. ಶೇ 10 ರಷ್ಟು ವಿಶೇಷ ಭತ್ಯೆ ಮಂಜೂರಾತಿ ಮಾಡಬೇಕು’ ಎಂದು ಒತ್ತಾಯಿಸಿದರು.
‘ಮೇ 26 ರಿಂದ 28 ರವರೆಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. 29 ರಂದು ಎಲ್ಲ ವಸತಿ ಶಾಲೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಾಗಿದೆ. ಶುಕ್ರವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗಿದೆ’ ಎಂದು ಹೇಳಿದರು.
ಶನಿವಾರ ಮುಖ್ಯಮಂತ್ರಿಗೆ ಮನವಿ ಕಳಿಸಿಕೊಡಲಾಗಿದೆ. ನಮ್ಮ ಈಡೇರಿಕೆಗೆ ಸ್ಪಂದಿಸದಿದ್ದರೆ ಜೂನ್ 2 ರಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ವಸತಿ ಶಾಲೆಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ನಂತರ ಜಿಲ್ಲಾಡಳಿತ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಸತಿ ಶಾಲೆಗಳ ನೌಕರರ ಸಂಘದ ಉಪಾಧ್ಯಕ್ಷ ರುದ್ರೇಶ, ಪ್ರಧಾನ ಕಾರ್ಯದರ್ಶಿ ಸಾಬುಗೌಡ, ಸಹ ಕಾರ್ಯದರ್ಶಿ ಪ್ರಕಾಶ ರಾಂಪೂರ, ಸಂಘಟನಾ ಕಾರ್ಯದರ್ಶಿ ಶಶಿಧರ, ಖಜಾಂಚಿ ಲಾಲ್ ಅಹ್ಮದ್ ಹಾಗೂ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.