ADVERTISEMENT

ಲಿಂಗಸುಗೂರು: ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಕಿರಿಯ ಪ್ರಾಥಮಿಕ ಶಾಲೆಗೆ ಸೌಲಭ್ಯ ಕೊರತೆ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:21 IST
Last Updated 31 ಮೇ 2022, 4:21 IST
ಲಿಂಗಸುಗೂರು ತಾಲ್ಲೂಕು ಜಹಗೀರನಂದಿಹಾಳ ಕಿರಿಯ ಪ್ರಾಥಮಿಕ ಶಾಲೆಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು
ಲಿಂಗಸುಗೂರು ತಾಲ್ಲೂಕು ಜಹಗೀರನಂದಿಹಾಳ ಕಿರಿಯ ಪ್ರಾಥಮಿಕ ಶಾಲೆಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು   

ಲಿಂಗಸುಗೂರು: ತಾಲ್ಲೂಕಿನ ಜಹಗೀರನಂದಿಹಾಳ ಕಿರಿಯ ಪ್ರಾಥಮಿಕ ಶಾಲೆ ಉನ್ನತೀಕರಣ ಮತ್ತು ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ವೈಫಲ್ಯತೆ ವಿರೋಧಿಸಿ ಶಾಲಾ ಸುಧಾರಣಾ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಸೋಮವಾರ ಶಾಲಾ ಮುಖ್ಯದ್ವಾರದ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ, 5ನೇ ತರಗತಿ ನಂತರದಲ್ಲಿ ಸುತ್ತಮುತ್ತ 4 ಕಿ.ಮೀ ಅಂತರ ಕಾಲ್ನಡಿಗೆಯಲ್ಲಿಯೇ ಸಣ್ಣ ಮಕ್ಕಳು ಶಾಲೆಗೆ ಹೋಗಬೇಕಾಗಿದೆ. ಮಳೆಗಾಲ, ಬೇಸಿಗೆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವ ಮಕ್ಕಳ ಭವಿಷ್ಯದತ್ತ ಗಮನ ಹರಿಸುವ ಅಗತ್ಯವಿದೆ ಎಂದರು.

ಜಹಗೀರನಂದಿಹಾಳದಿಂದ ಬೆಂಡೋಣಿ, ಆನೆಹೊಸೂರು, ರೋಡಲಬಂಡ ಸುತ್ತಮುತ್ತ 4 ರಿಂದ 5 ಕಿ.ಮೀ ದೂರ ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗಬೇಕು. ಕಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನವಿಲ್ಲ, ಕ್ರೀಡೆ, ಪೀಠೋಪಕರಣಗಳ ಸೌಲಭ್ಯ ಕೊರತೆಯಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ ಎಂದು ದೂರಿದರು.

ADVERTISEMENT

ಶಾಲಾ ಸುಧಾರಣ ಸಮಿತಿಯಿಂದ ಶಾಲೆಗೆ ಮೈದಾನ, ಕಲಿಕಾ ಸಾಮಗ್ರಿ, ಕ್ರೀಡಾ ಚಟುವಟಿಕೆ ಪೂರಕ ಸೌಲಭ್ಯ, ಪೀಠೋಪಕರಣ ತಂದುಕೊಳ‍್ಳಲು ಸಾಧ್ಯವಾಗುವುದಿಲ್ಲ. ಎಲ್ಲ ವ್ಯವಸ್ಥೆಗಳನ್ನು ಸರ್ಕಾರವೇ ಕಲ್ಪಿಸಿಕೊಡಬೇಕು. ಇಲ್ಲದೆ ಹೋದಲ್ಲಿ ಇರುವ ಕಿರಿಯ ಪ್ರಾಥಮಿಕ ಶಾಲೆಯು ತಮಗೆ ಬೇಡ ಎಂದು ಎರಡು ಗಂಟೆ ಕಾಲ ಮಕ್ಕಳು, ಶಿಕ್ಷಕರನ್ನು ಹೊರಗಡೆ ಹಾಕಿ ಕೀಲಿ ಹಾಕಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಭೇಟಿ ನೀಡಿ, ‘ತಮ್ಮ ಗ್ರಾಮದ ಶಾಲೆಯ ವಸ್ತುಸ್ಥಿತಿ ಬಗ್ಗೆ ಗಮನಕ್ಕೆ ಇದೆ. ಗ್ರಾಮಸ್ಥರೇಭೂಮಿ ನೀಡಬೇಕು. ಶಾಲಾ ಸುಧಾರಣ ಸಮಿತಿ ಸಹಕರಿಸಿದರೆ ಅಗತ್ಯ ಸೌಲಭ್ಯ ಕಲ್ಪಿಸಬಹುದು. ಮುಂದಿನ ವರ್ಷಕ್ಕೆ ಉನ್ನತೀಕರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮನವೊಲಿಸಿದರು.

ಶಿವಪುತ್ರಗೌಡ ಪಾಟೀಲ್‍, ಮಹಾದೇವಪ್ಪ ಸಾಹುಕಾರ, ಚಂದ್ರು, ರಾಯಪ್ಪ, ಗುಂಡಪ್ಪ, ಹನೀಫಸಾಬ, ಗದ್ದೆಪ್ಪ ಪೂಜಾರಿ, ಶೇಖರಪ್ಪ ಸಾಹುಕಾರ, ಅಮರಪ್ಪ ವಂದಲಿ, ಅಮರಪ್ಪ ಸಾಹುಕಾರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.