
ಪ್ರಜಾವಾಣಿ ವಾರ್ತೆ
ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಮಂತ್ರಾಲಯದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ ಮಾಡಲಾಯಿತು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಪಾದುಕೆಗಳಿಗೆ ಪುಷ್ಪಾಭಿಷೇಕ, ಕನಕಾಭಿಷೇಕ ಮತ್ತು ರತ್ನಾಭಿಷೇಕ ಮಾಡಿದರು.
ಚಿನ್ನದ ರಥ ಹಾಗೂ ಚಿನ್ನದ ಪಲ್ಲಕ್ಕಿಯಲ್ಲಿ ಪರಿಮಳ ಗ್ರಂಥಗಳನ್ನು ಇಟ್ಟು ಚಂಡಿ ವಾದ್ಯ ಭಜನ ಮಂಡಳಿಗಳ ಸದಸ್ಯರ ಜಯಘೋಷ ಮೊಳಗಿಸಲಾಯಿತು. ನಂತರ, ಶ್ರೀ ಮಠದ ಆವರಣದಲ್ಲಿ ಶ್ರೀ ರಾಯರ ರಥೋತ್ಸವ ನಡೆಯಿತು.
ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು. ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಮಂತ್ರಾಲಯದಲ್ಲಿ ಆಯೋಜಿಸಿದ್ದ ಹಿಂದೂ ಉತ್ಸವದ ಮೆರವಣಿಗೆಗೆ ಸ್ವಾಮೀಜಿ ಚಾಲನೆ ನೀಡಿದರು.