ರಾಯಚೂರು: ರಾಯಚೂರು ಉಪ ವಿಭಾಗಾಧಿಕಾರಿ ಮೆಹಬೂಬಿ ಅವರನ್ನು ಹಠಾತ್ ವರ್ಗಾವಣೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಜಗನ್ನಾಥ ಬಾಳೆ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಪ ವಿಭಾಗಾಧಿಕಾರಿ ಮೆಹಬೂಬಿ ಅವರು ನೂತನ ಉಪ ವಿಭಾಗಾಧಿಕಾರಿ ಜಗನ್ನಾಥ ಬಾಳೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಯಾವುದೇ ಪೂರ್ವ ಮಾಹಿತಿ ಇಲ್ಲದೇ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಮೆಹಬೂಬಿ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷವೂ ಪೂರ್ಣಗೊಂಡಿರಲಿಲ್ಲ. ಹಠಾತ್ ವರ್ಗಾವಣೆ ಕಚೇರಿ ಸಿಬ್ಬಂದಿಗೂ ಶಾಕ್ ನೀಡಿದೆ.
2023ರ ಜುಲೈ 10ರಂದು ರಾಯಚೂರಿಗೆ ಉಪ ವಿಭಾಗಾಧಿಕಾರಿ ಬಂದು ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ 2024ರ ಜನವರಿ 30ರಂದು ಚಿಕ್ಕೋಡಿ ವಿಭಾಗಕ್ಕೆ ವರ್ಗಾವಣೆ ಮಾಡಿದರು. ಚುನಾವಣೆ ಮುಗಿದ ನಂತರ ಜೂನ್ 10ಕ್ಕೆ ಮತ್ತೆ ರಾಯಚೂರಿಗೆ ವರ್ಗ ಮಾಡಲಾಯಿತು. ಈಗ ನಾಲ್ಕು ತಿಂಗಳಲ್ಲೇ ಮತ್ತೆ ಬೆಂಗಳೂರಿನ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಸಹಾಯಕ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿರುವ ಕಾಂಗ್ರೆಸ್ ಮುಖಂಡರ ಬಣಗಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಲ್ಲಿ ತೋರಿಸುವ ಆಸಕ್ತಿ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ತೋರಿಸುತ್ತಿಲ್ಲ. ಉತ್ತಮವಾಗಿ ಕೆಲಸ ಮಾಡುತ್ತಿರುವಾಗಲೇ ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.