
ರಾಯಚೂರು: ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಪುಸ್ತಕಗಳ ಮಾರಾಟ ಭರ್ಜರಿಯಾಗಿ ನಡೆದಿದೆ.
ಕೃಷಿ ಮೇಳದ ಮಾರಾಟ ಮಳಿಗೆಗಳಲ್ಲಿ ಸಪ್ನಾ ಬುಕ್ ಹೌಸ್‌ನ ಕಲಬುರಗಿ ಶಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪುಸ್ತಕ ಪ್ರಕಟಣೆ ವಿಭಾಗ, ಗದಗ ಮೂಲದ ಪುಸ್ತಕ ಮಾರಾಟ ಸಂಸ್ಥೆ, ಪಿಎಂ ವಿಶ್ವಕರ್ಮ ಯೋಜನೆಯ ಮಳಿಗೆಗಳಲ್ಲಿ ಬೆಂಗಳೂರಿನ ಸನ್ ಸ್ಟಾರ್ ಪುಸ್ತಕ ಪ್ರಕಾಶನ ಸಂಸ್ಥೆ ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆದಿತ್ತು. ಇವುಗಳ ಪೈಕಿ ಸಪ್ನಾ ಬುಕ್ ಹೌಸ್‌ನ ಕಲಬುರಗಿ ಶಾಖೆ, ಬೆಂಗಳೂರಿನ ಸನ್ ಸ್ಟಾರ್ ಪುಸ್ತಕ ಪ್ರಕಾಶನ ಸಂಸ್ಥೆಯ ಪುಸ್ತಕ ಮಾರಾಟ ಮಳಿಗೆಗಳು ಅತ್ಯಧಿಕ ಸಂಖ್ಯೆಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿವೆ.
‘ಉತ್ಸವದ ಎರಡು ದಿನಗಳಲ್ಲಿ ಪ್ರತಿ ದಿನ ಸುಮಾರು ₹70 ಸಾವಿರ ಮೊತ್ತದ ಪುಸ್ತಕಗಳು ಮಾರಾಟವಾಗಿವೆ. ಕೊನೆಯ ದಿನ ಶನಿವಾರ ಒಂದು ಲಕ್ಷ ರೂಪಾಯಿ ಮೊತ್ತದ ಪುಸ್ತಕಗಳು ಮಾರಾಟವಾಗುವ ನಿರೀಕ್ಷೆ ಇದೆ. ಪ್ರತಿ ದಿನ ಸುಮಾರು 500 ಪುಸ್ತಕಗಳು ಮಾರಾಟವಾಗಿವೆ. ವ್ಯಾಪಾರ ತೃಪ್ತಿ ತಂದಿದೆ’ ಎಂದು ಸಪ್ನಾ ಬುಕ್ ಹೌಸ್‌ನ ಕಲಬುರಗಿ ಶಾಖೆಯ ಸಹಾಯಕ ವ್ಯವಸ್ಥಾಪಕ ಪ್ರಭು ಶನಿವಾರ ತಿಳಿಸಿದರು.
ಬೆಂಗಳೂರಿನ ಸನ್ ಸ್ಟಾರ್ ಪುಸ್ತಕ ಪ್ರಕಾಶನ ಸಂಸ್ಥೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳ ಮಾರಾಟದ ಮೂಲಕ ಗಮನ ಸೆಳೆದಿದೆ. ಈ ಸಂಸ್ಥೆಯು ಎಲ್.ಕೆ.ಜಿಯಿಂದ 7ನೇ ತರಗತಿವರೆಗಿನ ಮಕ್ಕಳು ಬರೆಯುವಾಗ ಹಲವು ಬಾರಿ ತಪ್ಪುಗಳಾಗುವುದು ಸಹಜ. ಇದರಿಂದ ಕಾಗದ ಬಳಕೆ ಹೆಚ್ಚಾಗುವುದು. ಇದನ್ನು ತಪ್ಪಿಸಲು ಪುನಃ ಪುನಃ ಬರೆದು ಅಳಿಸುವ ಪುಸ್ತಕಗಳನ್ನು ಮಾರಾಟ ಮಾಡಿದೆ. ಕನ್ನಡದ ಕಾಗುಣಿತ ಮತ್ತು ಒತ್ತಕ್ಷರಗಳು, ಗಣಿತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿತ್ತು.
‘ನಿರೀಕ್ಷೆಗಿಂತ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ’ ಎಂದು ಸನ್ ಸ್ಟಾರ್ ಪುಸ್ತಕ ಪ್ರಕಾಶನದ ವರುಣ್ ತಿಳಿಸಿದರು.
‘ಜಿಲ್ಲಾ ಉತ್ಸವದಲ್ಲಿ ಅಂದಾಜು ₹5 ಲಕ್ಷ ಮೊತ್ತದ ಪುಸ್ತಕ ವಹಿವಾಟು ನಡೆದಿದೆ’ ಎಂದು ಪುಸ್ತಕ ಮಾರಾಟ ವ್ಯಾಪಾರಿಯೊಬ್ಬರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.