ರಾಯಚೂರು: ತೆಲಂಗಾಣದ ಜುರಾಲಾ ಯೋಜನೆಯಿಂದಾದರೂ ನದಿಗೆ ಸೇತುವೆ ಹಾಗೂ ರೈತರ ಜಮೀನುಗಳಿಗೂ ಒಂದಿಷ್ಟು ನೀರು ಸಿಗಲಿದೆ ಎನ್ನುವ ಕೃಷ್ಣಾ ನದಿ ದಂಡೆ ಗ್ರಾಮಸ್ಥರ 47 ವರ್ಷಗಳ ಕನಸು ಇನ್ನೂ ನನಸಾಗಿಲ್ಲ. ತೆಲಂಗಾಣ ತನ್ನ ಪಾಲಿನ ಎಲ್ಲ ಹಣ ಬಿಡುಗಡೆ ಮಾಡಿದರೂ ಕರ್ನಾಟಕ ಸರ್ಕಾರ ಕಾಮಗಾರಿ ಪೂರ್ಣಗೊಳಿಸಲು ಆಸಕ್ತಿ ತೋರಿಸುತ್ತಿಲ್ಲ!
1978ರಲ್ಲಿ ಕರ್ನಾಟಕ-ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿಗಳ ನಡುವೆ ಒಪ್ಪಂದ ಆಗಿದೆ. ಪ್ರಿಯದರ್ಶಿನಿ ಜುರಾಲಾ ಯೋಜನೆಗೆ ರಾಯಚೂರು ತಾಲ್ಲೂಕಿನ 2,466 ಎಕರೆ ಫಲವತ್ತಾದ ಭೂಮಿ ಬಿಟ್ಟುಕೊಡಲಾಗಿದೆ. ಹಿಂದಿನ ಅವಿಭಜಿತ ಆಂಧ್ರಪ್ರದೇಶ ಸರ್ಕಾರ ಭೂಸ್ವಾಧೀನಕ್ಕೆ ಪರಿಹಾರ, ಸಂತ್ರಸ್ತ ಗ್ರಾಮಗಳ ಪುನರ್ವಸತಿ, ಕೃಷ್ಣಾ ನದಿ ನಡುಗಡ್ಡೆ ಪುಣ್ಯಕ್ಷೇತ್ರಗಳಾದ ನಾರದಗಡ್ಡೆ ಮತ್ತು ದತ್ತಪೀಠಕ್ಕೆ ಸಂಪರ್ಕ ಕಲ್ಪಿಸಲು ಮೂರು ಸೇತುವೆಗಳ ನಿರ್ಮಾಣ ವೆಚ್ಚವೂ ಸೇರಿ ಕರ್ನಾಟಕಕ್ಕೆ ಆರಂಭಿಕ ಹಂತದಲ್ಲೇ ₹91 ಕೋಟಿ ನೀಡಿದೆ.
ಜುರಾಲಾ ಯೋಜನೆಯು ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಕುರ್ವಾಪುರ ಗ್ರಾಮದಿಂದ 10 ಕಿಲೊ ಮೀಟರ್ ಅಂತರದಲ್ಲಿದೆ. ಕೃಷ್ಣಾ ನದಿಗೆ 1,045 ಅಡಿ ಎತ್ತರದ ಜಲಾಶಯ ನಿರ್ಮಿಸಲಾಗಿದೆ. 11.94 ಟಿಎಂಸಿ ಅಡಿ ಸಾಮರ್ಥ್ಯದ ವಿದ್ಯುತ್ ಯೋಜನೆ 1995ರಲ್ಲಿ ಉದ್ಘಾಟನೆಗೊಂಡಿದೆ.
ಜುರಾಲಾ ಅಣೆಕಟ್ಟಿನ ಹಿನ್ನೀರಿನಿಂದ ಪ್ರತಿವರ್ಷ ಮಳೆಗಾಲದಲ್ಲಿ ರಾಯಚೂರು ಜಿಲ್ಲೆಯ ಗಡಿಭಾಗದ ಹಳ್ಳಿಗಳಾದ ಕುರುವಕುರ್ದ, ಕುರುವಲು, ವೇಣಿಗಡ್ಡಿ, ನಾರದಗಡ್ಡೆ ಮುಳುಗಡೆಯಾಗುತ್ತವೆ. ಅತ್ಕೂರು, ಬೂರ್ದಿಪಾಡ, ಡೋಂಗರಾಂಪುರ ಹಳ್ಳಿಗಳು ಭಾಗಶಃ ಜಲಾವೃತವಾಗುತ್ತವೆ. ಕುರ್ವಕಲಾ, ಕುರ್ವಕುರ್ದಾ, ಮಂಗಿಗಡ್ಡೆ, ಅಗ್ರಹಾರ ಹಾಗೂ ಭಾಗಶಃ ಬುರದಿಪಾಡ ಗ್ರಾಮಸ್ಥರು ಸಹ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿಲ್ಲ. ಈ ಗ್ರಾಮಗಳ ಜನರು ನಡುಗಡ್ಡೆಯಲ್ಲೇ ವಾಸ ಮಾಡುತ್ತಿದ್ದಾರೆ.
‘ಹಿಂದಿನ ಆಂಧ್ರಪ್ರದೇಶ ಸರ್ಕಾರ ಸೇತುವೆ ನಿರ್ಮಾಣದ ಎಲ್ಲ ಹಣವನ್ನೂ ಭರಿಸಲು ಒಪ್ಪಿಗೆ ಕೊಟ್ಟು ಅನುದಾನವನ್ನೂ ಬಿಡುಗಡೆ ಮಾಡಿದೆ. ಆದರೆ, ಲೋಕೋಪಯೋಗಿ ಅಧಿಕಾರಿಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಿದ್ಧರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಜಿಲ್ಲೆಗೆ ಅಪರೂಪದ ಅತಿಥಿಯಂತೆ ಬಂದು ಹೋಗುತ್ತಾರೆ. ಸೇತುವೆ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಒಂದು ಉದಾಹರಣೆಯೂ ಇಲ್ಲ. ಹೀಗಾಗಿ ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ’ ಎಂದು ಕುರ್ವಕಲಾ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಯಾದವ ಹಾಗೂ ಆತ್ಕೂರಿನ ಮುಖಂಡ ಹನುಮಂತ ರೆಡ್ಡಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಆತ್ಕೂರಿನಿಂದ ಕುರ್ವಾಪುರಕ್ಕೆ ರಸ್ತೆ ಇಲ್ಲ. ಹೀಗಾಗಿ ನದಿಯಲ್ಲಿ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ಮಂದಿರದ ವರೆಗೂ ಬಿಡಲು ಚಾಲಕರು ಹೇಳಿದಷ್ಟು ಹಣಕೊಟ್ಟು ಅನಿವಾರ್ಯವಾಗಿ ಶ್ರೀಪಾದವಲ್ಲಭನ ದರ್ಶನಕ್ಕಾಗಿ ದತ್ತಮಂದಿರಕ್ಕೆ ಬರುತ್ತೇವೆ’ ಎನ್ನುತ್ತಾರೆ ಹೈದರಾಬಾದ್‌ನಿಂದ ಬಂದಿದ್ದ ಭಕ್ತರು.
‘ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯೂ ನಿರ್ಮಾಣವಾಗಿಲ್ಲ. ಕಾಮಗಾರಿ ಪೂರ್ಣಗೊಳಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ.
‘ಜುರಾಲಾ ಯೋಜನೆಯಿಂದ ಮುಳುಗಡೆಯಾಗುವ ಗ್ರಾಮಗಳ ಪುನರ್ವಸತಿ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಆಂಧ್ರಪ್ರದೇಶವು ಕರ್ನಾಟಕ ಸರ್ಕಾರಕ್ಕೆ ಈವರೆಗೆ ಅಂದಾಜು ₹ 200 ಕೋಟಿ ಕೊಟ್ಟಿದೆ. ಈ ಹಣ ಇಂದಿಗೂ ಜಿಲ್ಲಾಧಿಕಾರಿ ಖಾತೆಯಲ್ಲೇ ಇದೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಅಧಿಕಾರಿಗಳು ಜನರ ಸಮಸ್ಯೆ ನಿವಾರಣೆಗೆ ಕೃಪೆ ತೋರುತ್ತಿಲ್ಲ’ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಂಗನಾಥ ಪೊಲೀಸ್‌ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.