ADVERTISEMENT

ರಾಯಚೂರು: ನೂರಕ್ಕೆ ಏರಿದ ಮೆಣಸಿನಕಾಯಿ ದರ

ಚಂದ್ರಕಾಂತ ಮಸಾನಿ
Published 19 ಜುಲೈ 2024, 5:33 IST
Last Updated 19 ಜುಲೈ 2024, 5:33 IST
<div class="paragraphs"><p>ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು</p></div>

ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು

   

ಚಿತ್ರ; ಶ್ರೀನಿವಾಸ ಇನಾಮದಾರ್

ರಾಯಚೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದೆ. ನದಿಕೊಳ್ಳಗಳು ತುಂಬಿ ಹರಿಯುತ್ತಿವೆ. ರಾಯಚೂರಿನಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ನದಿಗಳಿಗೂ ಈಗ ನೀರು ಹರಿದು ಬರಲಾರಂಭಿಸಿದೆ. ಹೀಗಾಗಿ ಬಹುತೇಕ ತರಕಾರಿ ಹೊರ ಜಿಲ್ಲೆಗಳಿಂದಲೇ ರಾಯಚೂರಿಗೆ ಬರುತ್ತಿದೆ.

ADVERTISEMENT

ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೆಲ ತರಕಾರಿ ಬೆಲೆ ದಿಢೀರ್‌ ಹೆಚ್ಚಾಗಿದೆ.

ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರ, ಟೊಮೆಟೊ, ಬದನೆಕಾಯಿ, ಬೀನ್ಸ್ ಹಾಗೂ ಡೊಣ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹ 8 ಸಾವಿರ ಹೆಚ್ಚಾಗಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲೂ ಇವುಗಳ ಬೆಲೆ ಏರಿದೆ.

ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಗಜ್ಜರಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು , ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

ಅಲ್ಲಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಕಾರಣ ರಾಯಚೂರು ಮಾರುಕಟ್ಟೆಗೆ ವ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಮಳೆ ಹೆಚ್ಚಾದರೆ ಆವಕ ಇನ್ನಷ್ಟು ಕಡಿಮೆಯಾಗಿ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

‘ಒಂದೆರಡು ತರಕಾರಿ ಬಿಟ್ಟರೆ ಉಳಿದೆಲ್ಲ ತರಕಾರಿ ಬೆಲೆ ಸ್ಥಿರವಾಗಿದೆ. ಟೊಮೆಟೊ ಬೇಡಿಕೆ ಹೆಚ್ಚಿದ ಕಾರಣ ಬೆಲೆ ಏರಿದೆ. ಬೀನ್ಸ್‌, ಬದನೆಕಾಯಿ ಹಾಗೂ ಡೊಣ ಮೆಣಸಿನಕಾಯಿ ಬೆಲೆ ಮಾತ್ರ ಹೆಚ್ಚಿದೆ. ಎರಡು ವಾರ ತರಕಾರಿ ಬೆಲೆ ಇಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.