
ರಾಯಚೂರು: ಜಿಲ್ಲೆಯ ರಾಜಕಾರಣಿಗಳ ಗುಂಪುಗಾರಿಕೆ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿದರೂ ರಾಯಚೂರು ಜಿಲ್ಲೆಗೆ ಪ್ರಮುಖ ಮೂರು ಅಧಿಕಾರಿಗಳು ಬಂದ ಮೇಲೆ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ನಗರ ಸೌಂದರ್ಯೀಕರಣ ಹಾಗೂ ಅಭಿವೃದ್ಧಿಯ ಕನಸು ಚಿಗುರೊಡೆಯ ತೊಡಗಿದೆ.
ಜಿಲ್ಲಾಧಿಕಾರಿ ನಿತೀಶ್, ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ಬದಲಾವಣೆ ಕಾಣಲಾರಂಭಿಸಿದೆ. ಪ್ರತಿಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಚಿವರು ಪತ್ರಿಕಾಗೋಷ್ಠಿ ನಡೆಸಿದಾಗ ‘ಜಿಲ್ಲಾ ಉತ್ಸವ’ ಯಾವಾಗ ಮಾಡ್ತೀರಾ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಕೊನೆಗೂ ಕೃತಿಯ ಮೂಲಕ ಉತ್ತರ ನೀಡಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿನ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಜಾಗವನ್ನು ಭೂಗಳ್ಳರ ಕಪಿಮುಷ್ಠಿಯಿಂದ ಮುಕ್ತಗೊಳಿಸಿದ್ದಾರೆ. ನಗರ ನೈರ್ಮಲ್ಯಕ್ಕೆ ಒತ್ತುಕೊಟ್ಟಿದ್ದಾರೆ. ಸ್ಮಾರಕಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಪ್ರತಿಯೊಂದಕ್ಕೂ ವಿರೋಧ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಸಂಘಟನೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾಣ ನಡೆ ನಡೆಯುತ್ತಿದ್ದಾರೆ.
ರಾಯಚೂರು ಜಿಲ್ಲಾ ಉತ್ಸವದ ದಿನಾಂಕ ಘೋಷಣೆಯಾದ ಸಾಂಸ್ಕೃತಿಕ ಸಂಘಟನೆಗಳಲ್ಲೂ ಸಂಚಲನ ಮೂಡಿದೆ. ನೃತ್ಯ, ಸಂಗೀತ ಕಲೆಗಳ ಸಂಸ್ಥೆಗಳಿಗೂ ಜೀವ ಬಂದಿದೆ. ಜಿಲ್ಲಾಡಳಿತವು ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಅವು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ.
ಕಲೆಗಳ ಅನಾವರಣ:
ರಾಯಚೂರು ಮಹಾನಗರಪಾಲಿಕೆಯು ಮುಖ್ಯ ಹಾಗೂ ಜನನಿಬಿಡ ಪ್ರದೇಶದಲ್ಲಿನ ಮಾರ್ಗದಲ್ಲಿನ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಚಿತ್ರಕಲೆಗಳನ್ನು ಬಿಡಿಸಿ ಉತ್ಸವಕ್ಕೆ ರಂಗು ತುಂಬುವ ಕಾರ್ಯಕ್ಕೆ ಚಾಲನೆ ನೀಡಿದೆ.
ಎರಡು ವಾರಗಳ ಹಿಂದೆಯೇ ಚಿತ್ರಗಳನ್ನು ಬಿಡಿಸುವ ಕಾರ್ಯ ಸದ್ದಿಲ್ಲದಂತೆ ಆರಂಭವಾಗಿದ್ದು, ಚಿತ್ರಗಳ ಮೂಲಕವೇ ಗಮನ ಸೆಳೆಯುತ್ತಿದೆ. ರಾಯಚೂರು ಜಿಲ್ಲೆಯಲ್ಲಿರುವ ಸ್ಮಾರಕಗಳು, ಭತ್ತದ ಗದ್ದೆಗಳು, ಪರಿಸರ, ಪಕ್ಷಿಗಳ ಚಿತ್ರಗಳು ಗೋಡೆಗಳು ಮೇಲೆ ಮೂಡಲಾರಂಭಿಸಿವೆ.
ದಾರಿಯಲ್ಲಿ ಸಾಗುವವರು ಒಂದು ಕ್ಷಣ ನಿಂತು ಚಿತ್ರಗಳನ್ನು ನೋಡಿ ಮುಂದೆ ಸಾಗುವಷ್ಟರ ಮಟ್ಟಿಗೆ ಚಿತ್ರಗಳು ಗಮನ ಸೆಳೆಯುತ್ತಿವೆ. 10 ವರ್ಷಗಳವರೆಗೂ ಬಾಳಿಕೆ ಬರುವಂತಹ ಗುಣಮಟ್ಟದ ಬಣ್ಣಗಳನ್ನು ಬಳಸುತ್ತಿರುವ ಕಾರಣ ಅವು ಹೆಚ್ಚು ಆಕರ್ಷಕವೂ ಆಗಿವೆ. ಕಲಾಸಕ್ತರು ಹಾಗೂ ಮಕ್ಕಳನ್ನು ಹೆಚ್ಚು ಸೆಳೆಯುತ್ತಿವೆ.
‘ಲಿಂಗಸುಗೂರು ರಸ್ತೆ ಹಾಗೂ ಸ್ಟೇಷನ್ ರಸ್ತೆಗಳ ಬದಿಗೆ ಇರುವ ಗೋಡೆಗಳ ಮೇಲೆ ಈಗಾಗಲೇ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ. ಜನ ಕುತೂಹಲದಿಂದಲೇ ಅವುಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ನಗರದ ಜನತೆಗೂ ಖುಷಿ ಕೊಡುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಹಫಿಜುಲ್ಲಾ ಹೇಳುತ್ತಾರೆ.
ಲಿಂಗಸುಗೂರು ರಸ್ತೆಯ ಜೆಸ್ಕಾಂ ಕಚೇರಿಯ ಗೋಡೆಗಳ ಮೇಲೆ ಬೀದರ್ ಕೋಟೆ, ಬಾದಾಮಿ ಚಾಲುಕ್ಯರ ಐಹೊಳೆ ಸ್ಮಾರಕ, ಭತ್ತದ ಗದ್ದೆಗಳು, ರೈತರು, ಸ್ಟೇಷನ್ ರಸ್ತೆಯ ಪದವಿ ಪೂರ್ವ ಕಾಲೇಜಿನ ಗೋಡೆಗಳ ಮೇಲೆ ಕಲೆಯಲ್ಲಿ ಅನಾವರಣಗೊಂಡಿರುವ ಪಕ್ಷಿಗಳು ನೋಡುಗರ ಗಮನ ಸೆಳೆಯುತ್ತಿವೆ.
ಸೌಂದರ್ಯೀಕರಣಕ್ಕೆ ₹ 20 ಲಕ್ಷ:
‘ರಾಯಚೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 60 ಸಾವಿರ ಚದರ ಅಡಿ ಸರ್ಕಾರಿ ಕಚೇರಿಗಳ ಆವರಣ ಗೋಡೆಗಳು ಚಿತ್ರ ಬಿಡಿಸಲು ಸ್ಥಳಾವಕಾಶ ಇದೆ. ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ದಾನಿಗಳಿಂದ ಸ್ವಲ್ಪ ಮಟ್ಟಿಗೆ ಪೇಂಟಿಂಗ್ ಮಾಡಿಸಲಾಗಿತ್ತು. ಈಗ ಅದಕ್ಕಿಂತ ಹೆಚ್ಚು ಗುಣಮಟ್ಟವಿರುವ ಪೇಂಟ್ ಬಳಸಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ’ ಎಂದು ರಾಯಚೂರು ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರಾ ಹೇಳುತ್ತಾರೆ.
‘ಸಮಿತಿಯೊಂದನ್ನು ರಚಿಸಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹೀಗೆ ಬೇರೆ ಬೇರೆ ಕಡೆಯ ಕಲಾವಿದರ ಕಾರ್ಯವನ್ನು ವೀಕ್ಷಿಸಿ, ಅವರು ಕೈಗೊಂಡಿರುವ ಚಿತ್ರಗಳ ಮಾದರಿ ವೀಕ್ಷಿಸಿದ ನಂತರ ಕೆಲ ತಂಡಗಳಿಗೆ ಚಿತ್ರಗಳನ್ನು ರಚಿಸುವ ಹೊಣೆ ವಹಿಸಲಾಗಿದೆ‘ ಎನ್ನುತ್ತಾರೆ.
‘ಸದ್ಯ ಹುಬ್ಬಳ್ಳಿಯ ಹಾರ್ಟ್ ವಾಲಾ ಕಂಪನಿಯ ಕಲಾವಿದರು ಚಿತ್ರಬಿಡಿಸಲು ಆರಂಭಿಸಿದ್ದಾರೆ. ಧಾರವಾಡ, ಗದಗ ಹಾಗೂ ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ. ಒಟ್ಟು ಒಂಬತ್ತು ತಂಡಗಳು ಚಿತ್ರಬಿಡಿಸುವಲ್ಲಿ ತೊಡಗಿಸಿಕೊಂಡಿವೆ. ಒಟ್ಟಾರೆ ನಗರದೆಲ್ಲಡೆ ಸಾಂಸ್ಕೃತಿಕ ಸಂಭ್ರಮ ಕಾಣುವಂತ ವಾತಾವರಣ ಸೃಷ್ಟಿಸಲಾಗುತ್ತಿದೆ‘ ಎಂದು ಹೇಳುತ್ತಾರೆ,
‘ಎರಡು ಹಂತಗಳಲ್ಲಿ ಚಿತ್ರಕಲೆ ಬಿಡಿಸುವ ಕಾರ್ಯ ನಡೆಯಲಿದೆ. ಎಸ್‌ಬಿಎಂ2 ಯೋಜನೆಯ ಮಾಹಿತಿ ಶಿಕ್ಷಣ ಹಾಗೂ ಕೊಡುಗೆ ಉಪ ಯೋಜನೆಯಲ್ಲಿ ₹ 20 ಲಕ್ಷ ವೆಚ್ಚದಲಿ ಪೇಂಟಿಂಗ್ ಕಾರ್ಯ ನಡೆದಿದೆ. ಮೊದಲ ಹಂತದಲ್ಲಿ ಲಿಂಗಸುಗೂರು ರಸ್ತೆ, ಸ್ಟೇಷನ್ ರಸ್ತೆ, ಬಾಬು ಜಗಜೀವನರಾಂ ವೃತ್ತ, ರಂಗ ಮಂದಿರ ರಸ್ತೆ ಪರಿಸರದಲ್ಲಿನ ಗೋಡೆಗಳ ಮೇಲೆ ಚಿತ್ರಗಳು ಮೂಡಲಿವೆ‘ ಎಂದು ವಿವರಿಸುತ್ತಾರೆ.
‘ನಿಜಲಿಂಗಪ್ಪ ಕಾಲೊನಿ, ಡ್ಯಾಡಿಕಾಲೊನಿ ಮಾರ್ಗವಾಗಿ ಯಕ್ಲಾಸಪುರಕ್ಕೆ ಹೋಗುವ ಮಾರ್ಗದಲ್ಲಿರುವ ಜೆಸ್ಕಾಂನ ಗೋಡೆಗಳ ಮೇಲೆ ಬಣ್ಣದ ಚಿತ್ತಾರಗಳು ಮೂಡಲಿವೆ. ಮಾರ್ಚ್ ನಂತರ ಆರ್‌ಟಿಒ ಕಚೇರಿ ವೃತ್ತ, ಮಂತ್ರಾಲಯ ಮಾರ್ಗದಲ್ಲಿನ ಗೋಡೆಗಳ ಮೇಲೂ ಚಿತ್ರಗಳು ಮೂಡಿಬರಲಿವೆ‘ ಎಂದು ಹೇಳುತ್ತಾರೆ.
ಲಿಂಗಸುಗೂರು ರಸ್ತೆಯ ಜೆಸ್ಕಾಂ ಗೋಡೆಗಳ ಮೇಲೆ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಬಿಡಿಸಲಾಗಿದ್ದು ಗರಿಷ್ಠ 10 ವರ್ಷಗಳ ಬಾಳಿಕೆ ಬರಲಿದೆ.ಇಪ್ತಿಯಾರ್ ಅಹಮ್ಮದ್ ಸಗರಿ ಹುಬ್ಬಳ್ಳಿ ಕಲಾವಿದ
ರಾಯಚೂರು ರೈಲು ನಿಲ್ದಾಣ ಮಾರ್ಗದಲ್ಲಿನ ಶಿಕ್ಷಣ ಸಂಸ್ಥೆಗಳ ಗೋಡೆಗಳ ಮೇಲೆ ಪಕ್ಷಿಗಳ ಹಾಗೂ ಹೂವಿನ ಚಿತ್ರಗಳನ್ನು ಬಿಡಿಸಲಾಗಿದೆಮಹಾಂತೇಶ ಗುಗ್ಗರಿ ಗದಗ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.