ADVERTISEMENT

ರಾಯಚೂರು | ‘ಲಂಚದ ಊಟ ಮಾಡುವುದಿಲ್ಲ’ ಎನ್ನುವ ಕಾಲ ಬರಬೇಕು: ನ್ಯಾ.ಬಿ.ವೀರಪ್ಪ

ಉಪ ಲೋಕಾಯುಕ್ತರಿಂದಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:26 IST
Last Updated 30 ಆಗಸ್ಟ್ 2025, 6:26 IST
ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ‌ ನ್ಯಾ.ಬಿ ವೀರಪ್ಪ ಮಾತನಾಡಿದರು
ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ‌ ನ್ಯಾ.ಬಿ ವೀರಪ್ಪ ಮಾತನಾಡಿದರು   

ರಾಯಚೂರು: ‘ನಾವೆಲ್ಲರೂ ಸಂಕಲ್ಪ ಮಾಡಿ ಭ್ರಷ್ಟಾಚಾರದ ಪಿಡುಗು ನಿರ್ಮೂಲನೆ ಮಾಡಿದರೆ ಭಾರತ ನಂಬರ್ ಒನ್ ದೇಶವಾಗಿ ಹೊರ ಹೊಮ್ಮಲಿದೆ’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ಶುಕ್ರವಾರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ಯಾನ್ಸರ್ ಖಾಯಿಲೆಯನ್ನು ಗುಣಪಡಿಸಬಹುದು. ಆದರೆ ಭ್ರಷ್ಟಾಚಾರ ತೊಲಗಿಸಲು ಆಗದು ಎನ್ನುವ ಹಾಗೆ ಭ್ರಷ್ಟಾಚಾರ ಎಲ್ಲೆಡೆ ಬಹುದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಎಲ್ಲರೂ ಭ್ರಷ್ಟರಲ್ಲ; ಕೆಲವರು ಮಾತ್ರ ಹಾದಿ ತಪ್ಪಿದ್ದಾರೆ. 450 ಹಾಜರಿ ಹಾಕಿ, 150 ವಿದ್ಯಾರ್ಥಿಗಳಿಗಷ್ಟೇ ಊಟ ನೀಡಿ, ಬಾಕಿ ಹಾಜರಾತಿಯ ಹಣ ತಿನ್ನುವಂತಹ ಭ್ರಷ್ಟ ವಾರ್ಡನ್, ಅಧಿಕಾರಿಗಳು ನಮ್ಮ ಮಧ್ಯೆ ಇದ್ದಾರೆ. ವಿದ್ಯಾರ್ಥಿಗಳ ಊಟದ ಹಣ ತಿನ್ನುವುದು ಅನ್ನದ ಮೇಲೆ ಮಾಡುವ ಮೋಸವಾಗಿದೆ. ಅನ್ಯರ ಅನ್ನದ ಹಣ ತಿನ್ನುವುದು ದೇಶಕ್ಕೆ ದ್ರೋಹ ಮಾಡಿದಂತೆ’ ಅವರು ಎಂದರು.

‘ಅಧಿಕಾರಿಗಳು ಭ್ರಷ್ಟ ಹಣವನ್ನು ಮನೆಗೆ ಒಯ್ದರೆ ಅವರ ಹೆಂಡತಿ ಮತ್ತು ಮಕ್ಳಳು ‘ನಾವು ಲಂಚದ ಊಟ ಮಾಡುವುದಿಲ್ಲ’ ಎಂದು ಹೇಳುವ ಕಾಲ ಬರಬೇಕಿದೆ. ನಾವು ತಿನ್ನುವ ಅನ್ನ ಬೇರೆಯವರದಾದರೆ ಅದು ವಿಷ ಎಂದು ಅರ್ಥೈಸಿಕೊಂಡು ಜೀವನ ನಡೆಸಿದಾಗ ಈ ಸಮಾಜದ ಬದಲಾವಣೆ ಸಾಧ್ಯವಿದೆ ಎಂದರು.

‘ಒಂದು ಖಾತಾ ಮಾಡೋಕೆ ತಿಂಗಳುಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಕೆಲ ಅಧಿಕಾರಿಗಳ ಮತ್ತು ಸಿಬ್ಬಂದಿಯ ಕಾರ್ಯವೈಖರಿ ಕಂಡು ಜನರು ಬೇಸತ್ತಿದ್ದಾರೆ. ತಮ್ಮ ಹಕ್ಕಿಗಾಗಿ ಸಿಡಿದೇಳುವ ಕಾಲ ದೂರವಿಲ್ಲ’ ಎಂದು ಉಪ ಲೋಕಾಯುಕ್ತರು ಎಚ್ಚರಿಕೆ ನೀಡಿದರು.

ಮಹನೀಯರ ಫೋಟೊ ಬಳಸಬೇಡಿ: ಮಹನೀಯರ ಭಾವಚಿತ್ರಗಳನ್ನು ಲೇಟರ್ ಹೆಡ್‌ನಲ್ಲಿ ಬಳಸಬಾರದು. ತಿಳಿವಳಿಕೆಯಿಲ್ಲದೇ, ಮನಸಿಗೆ ಬಂದಂತೆ ಲೆಟರ್ ಬಳಕೆ ಮಾಡುವುದು ತಪ್ಪಾಗುತ್ತದೆ ಎಂದು ಲೋಕಾಯುಕ್ತರು ತಿಳಿಸಿದರು.

ಗ್ರಾ.ಪಂ ಸದಸ್ಯರಲ್ಲಿ ಮನವಿ: ಗ್ರಾಮಗಳಲ್ಲಿನ ಕೊಳಚೆ ನೀರು ಕೆರೆ, ಬಾವಿಗೆ, ನದಿಗೆ ಹರಿಯಬಾರದು. ಆ ನೀರಿಗೆ ಇಂಗುಗುಂಡಿ ಮಾಡಿಸಲು ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸದಸ್ಯರು ಕಾಳಜಿ ವಹಿಸಬೇಕು ಎಂದು ಉಪ ಲೋಕಾಯುಕ್ತರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ನಿತೀಶ್ ಕೆ ಮಾತನಾಡಿದರು.

ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ.ಸಾತ್ವಿಕ, ಬೆಂಗಳೂರಿನ ಉಪ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕ ರಮಾಕಾಂತ ಚವ್ಹಾಣ್,‌ ಶಿವಾಜಿ ಅನಂತ ನಲವಾಡೆ, ಉಪ ನಿಬಂಧಕ ಅರವಿಂದ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ್ ಬಿ.ಚಿಟುಗುಬ್ಬಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ, ಕರ್ನಾಟಕ ಲೋಕಾಯುಕ್ತದ ಡಿಎಸ್ಪಿ ರವಿ ಪುರಷೋತ್ತಮ ಉಪಸ್ಥಿತರಿದ್ದರು.

ಕೊಪ್ಪಳ ಡಿಎಸ್ಪಿ ವಸಂತಕುಮಾರ ನಿರೂಪಿಸಿದರು. ಮಹಾಲಕ್ಷ್ಮಿ ನಾಡಗೀತೆ ಹೇಳಿದರು.

ರಾಯಚೂರು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಪ ಲೋಕಾಯುಕ್ತರು ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

ಜಲ ಶುದ್ಧೀಕರಣ ಘಟಕಕ್ಕೆ ಭೇಟಿ

ರಾಯಚೂರು: ಚಿಕ್ಕಸೂಗುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧೀನದಲ್ಲಿ ನಿರ್ಮಿಸಲಾದ ಜಲ ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತ ಬಿ‌.ವೀರಪ್ಪ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು. ಪ್ರಯೋಗಾಲಯದಲ್ಲಿನ ಕೆಮಿಕಲ್ ಸಾಮಗ್ರಿ ಮತ್ತು ಇನ್ನಿತರ ಘಟಕಗಳ ವೀಕ್ಷಣೆ ನಡೆಸಿ ನೀರು ಶುದ್ಧೀಕರಣದ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಘಟಕದಿಂದ ರಾಯಚೂರ ನಗರಕ್ಕೆ ಪ್ರತಿ ದಿನ 40 ಎಂಎಲ್‌ಡಿ ನೀರು ಸರಬರಾಜು ‌ಮಾಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ತಿಳಿಸಿದರು. ನೀರು ಶುದ್ಧೀಕರಿಸಲು ಬಳಸುವ ಆಲಂ ಮತ್ತು ಬ್ಲಿಚಿಂಗ್ ಪೌಡರನ್ನು ಉಪ ಲೋಕಾಯುಕ್ತರು ಇದೆ ವೇಳೆ ಪರಿಶೀಲಿಸಿದರು. ಕೃಷ್ಣಾ ನದಿ ನೀರಿನ ಸದ್ಯದ ಸ್ಥಿತಿ ನೀರಿನ ಪರೀಕ್ಷೆ ಸೇರಿದಂತೆ ನಾನಾ ಮಾಹಿತಿ ಪಡೆದುಕೊಂಡರು. ಜಲ ಶುದ್ದೀಕರಣ ಘಟಕದಲ್ಲಿ ನಿತ್ಯ ಕೆಲಸ ಮಾಡುವ ಸಿಬ್ಬಂದಿಗೆ ಉಪ ಲೋಕಾಯುಕ್ತರು ಆರೋಗ್ಯದ ಪಾಠ ಮಾಡಿದರು.  

ಘನತ್ಯಾಜ್ಯ ವಿಲೇವಾರಿಗೆ ವಿಳಂಬ: ಪಾಲಿಕೆಯ ಪರಿಸರ ಎಂಜಿನಿಯರ್ ಮೇಲೆ ಸುಮೋಟೊ ಕೇಸ್

ರಾಯಚೂರು: ಉಪ ಲೋಕಾಯುಕ್ತರಾದ ಬಿ‌ ವೀರಪ್ಪ ಗುರುವಾರ ಬೆಳಿಗ್ಗೆಯಿಂದಲೇ ಅನಿರೀಕ್ಷಿತ ಭೇಟಿ ಮುಂದುವರಿಸಿದರು. ಮೊದಲಿಗೆ ಹೈದರಬಾದ್‌ ರಸ್ತೆಯಲ್ಲಿನ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿಂದ ನೇರವಾಗಿ ಯಕ್ಲಾಸಪುರ ಗ್ರಾಮದ ಬಳಿಯಲ್ಲಿನ ಘನ ತ್ಯಾಜ್ಯ ಸಂಪನ್ಮೂಲ ಪುನರ್ಬಳಕೆ ನಿರ್ವಹಣಾ ಘಟಕಕ್ಕೆ ತೆರಳಿ ಪರಿಶೀಲಿಸಿದರು. ಈ ಘಟಕದಲ್ಲಿ ಘನ ತ್ಯಾಜ್ಯ ಹೀಗೇಕೆ ಬಿದ್ದಿದೆ. ಕಸ ಹೀಗೆ ಗುಡ್ಡಿಯಾಗಿ ಬಿದ್ದು ಎಷ್ಟು ವರ್ಷಗಳಾಗಿವೆ. ಇದನ್ನು ವಿಲೇವಾರಿ ಮಾಡಲು ತೊಂದರೆ ಏನು ಎಂದು  ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪರಿಸರ ಎಂಜಿನಿಯರ್ ಅವರಿಗೆ ಪ್ರಶ್ನಿಸಿದರು. ಈ ಘನ ತ್ಯಾಜ್ಯ ವಿಲೇವಾರಿಗೆ ಅನುದಾನ ಬಂದಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ರಾಶಿರಾಶಿಯಾಗಿ ಕಸ ಬಿದ್ದು ಅದರ ಮೇಲೆ ಗಿಡಗಳು ಬೆಳೆದರೂ ವಿಲೇವಾರಿಗೆ ವಿಳಂಬ ಮಾಡಿದ್ದು ಅಕ್ಷಮ್ಯ ಎಂದು ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿ ಎಂಜಿನಿಯರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.