
ರಾಯಚೂರು: ಬ್ಯಾಂಕ್ ಅಕೌಂಟ್‌ಗೆ ಕನ್ನ ಹಾಕಿ ಹ್ಯಾಕರ್ಸ್‌ಗಳಿಂದ ಲೂಟಿ ಮಾಡುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳನ್ನು ಗುರಿಯಾಗಿಸಿಕೊಂಡು ಮೊಬೈಲ್ ಮೂಲಕ ಹಣ ದೋಚುವ ವಂಚಕರ ತಂಡ ರಾಯಚೂರಲ್ಲಿ ಸಕ್ರಿಯವಾಗಿದೆ.
ರಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗಳಿಗೆ ತೆರಳುವ ರೋಗಿಗಳ ಪಟ್ಟಿ ಸಿದ್ಧಪಡಿಸಿಕೊಂಡು ರೋಗಿಗಳ ಸಂಬಂಧಿಗಳ ಚಲನವಲನಗಳ ಮೇಲೆ ನಿಗಾವಹಿಸಿ ಸರಿಯಾಗಿ ಸ್ಕೆಚ್ ಹಾಕಿ ವ್ಯವಸ್ಥಿತ ರೀತಿಯಲ್ಲಿ ವಂಚಿಸುತ್ತಿದೆ. ರೋಗಿಗಳು ಹಣ ಕಳೆದುಕೊಂಡ ಮೇಲೆ ಮೋಸ ಹೋಗಿರುವುದು ಮನವರಿಕೆಯಾಗಿ ದಂಗಾಗುತ್ತಿದ್ದಾರೆ.
ರಾಯಚೂರು, ಆಂಧ್ರಪ್ರದೇಶ, ತೆಲಂಗಾಣ, ಯಾದಗಿರಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ನಿತ್ಯ ನೂರಾರು ರೋಗಿಗಳು ಇಲ್ಲಿಯ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಇಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ವಂಚಕರು ರೋಗಿಗಳನ್ನು ವಂಚಿಸಲು ಆರಂಭಿಸಿದೆ.
ರಿಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗಳಿಗೆ ತೆರಳುವ ರೋಗಿಗಳ ನಂಬರ್‌ಗಳನ್ನು ಪಡೆದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೂ ಹೊಸ ಯೋಜನೆ ಪ್ರಕಾರ ಸರ್ಕಾರದಿಂದ ನಿಮಗೆ ರಿಯಾಯಿತಿ ದೊರೆಯಲಿದೆ ಎಂದು ನಂಬಿಸಿ ಬ್ಯಾಂಕ್ ಪಾಸ್‌ಬುಕ್, ಆಧಾರಕಾರ್ಡ್ ಝರಾಕ್ಸ್ ಪ್ರತಿಗಳನ್ನು ವಾಟ್ಸ್‌ಆಪ್‌ಗೆ ಕಳಿಸುವಂತೆ ಸೂಚಿಸುತ್ತಾರೆ. ವಂಚಕರನ್ನು ನಂಬಿ ದಾಖಲೆಗಳನ್ನು ಕಳಿಸಿದ ತಕ್ಷಣ ಕ್ಯೂಆರ್‌ಕೋಡ್ ಕಳಿಸಿ ಹಣ ದೋಚುತ್ತಿದ್ದಾರೆ. ರೋಗಿಗಳು ನಂಬಿ ₹ 500ರಿಂದ ₹ 2000 ಹಣ ಹಾಕಿದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದಾರೆ.
ರೋಗಿಗಳಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ರಿಮ್ಸ್ ಆಡಳಿತದ ಗಮನಕ್ಕೆ ಬಂದ ನಂತರ ರಿಮ್ಸ್‌ನ ಡಾ.ಸುಶ್ರೂತ್ ಅವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಇದೀಗ ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ರಿಮ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಸುನೀಲ ದೂರು ಕೊಟ್ಟಿದ್ದಾರೆ.
‘ವೈದ್ಯಕೀಯ ಸೌಲಭ್ಯದಲ್ಲಿ ರಿಯಾಯಿತಿ ಕಲ್ಪಿಸುವುದಾಗಿ ನಂಬಿಸಿ ರೋಗಿಗಳಿಗೆ ವಂಚಿಸಿದ ವ್ಯಕ್ತಿಯೊಬ್ಬನನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕಚೇರಿ ಹೊರಗಡೆ ಮೊಬೈಲ್‌ನಲ್ಲಿ ವ್ಯವಹರಿಸುವಂತೆ ಕೋರುವ ಅಪರಿಚತ ವ್ಯಕ್ತಿಗಳಿಂದ ಸಾರ್ವಜನಿಕರು ದೂರವಿರಬೇಕು’ ಎಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ತಿಳಿಸಿದ್ದಾರೆ.
‘ಸೈಬರ್ ವಂಚಕರು ಹಣ ವಸೂಲಿಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ರೋಗಿಗಳು ಹಾಗೂ ರೋಗಿಗಳ ಸಂಬಂಧಕರು ಇಂತಹ ವಂಚಕರಿಂದ ಎಚ್ಚರಿಕೆಯಿಂದ ಇರಬೇಕು. ವಂಚಕರು ಕಂಡು ಬಂದರೆ ತಕ್ಷಣ ಸೈಬರ್ ಠಾಣೆಗೆ ದೂರು ಕೊಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮನವಿ ಮಾಡಿದ್ದಾರೆ.

ಮೊಬೈಲ್‌ನಲ್ಲಿ ದಾಖಲೆ ತರಿಸಿಕೊಂಡು ಹಣ ಹಾಕಿಸಿಕೊಂಡು ಮೋಸ ಮಾಡಿದರೂ ಅದು ಸೈಬರ್ ಅಪರಾಧವೇ ಆಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ.ಪುಟ್ಟಮಾದಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ 8 ಜನರಿಗೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯ ಬ್ಯಾಂಕ್ ದಾಖಲೆ ಪರಿಶೀಲಿಸಲಾಗುತ್ತಿದೆ.ವೆಂಕಟೇಶ ಹೊಗಿಬಂಡಿ ಡಿವೈಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.