
ರಾಯಚೂರು: ಗುಬ್ಬೇರು ಬೆಟ್ಟದ ಮೇಲೆ ಸೂರ್ಯರಶ್ಮಿ ಬೀಳುತ್ತಿದ್ದಂತೆಯೇ ಎಡೆದೊರೆ ನಾಡಿನ ಸೈಕ್ಲಿಸ್ಟ್‌ಗಳು ಕತ್ತಲಲ್ಲೂ ಮಿನುಗುವ ಸೈಕ್ಲಿಂಗ್ ಹೆಲ್ಮೆಟ್ ಧರಿಸಿ, ಸೈಕಲ್‌ಗಳಿಗೆ ಟಾರ್ಚ್ ಬೆಳಕು ಹಾಕಿಕೊಂಡು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸರತಿ ಸಾಲಿನಲ್ಲಿ ಬಂದು ನಿಂತು ಸೈಕ್ಲಾಥಾನ್‌ಗೆ ಮೆರುಗು ತುಂಬಿದರು.
ಮಹಿಳೆಯರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಸೈಕ್ಲಿಸ್ಟ್‌ಗಳ ಬೆಲೆಬಾಳುವ ಸೈಕಲ್‌ಗಳನ್ನು ನೋಡಿ ಕಣ್ತುಂಬಿಕೊಂಡರು. ಸೈಕ್ಲಿಸ್ಟ್‌ಗಳ ಸಮವಸ್ತ್ರ ಮಕ್ಕಳ ಗಮನ ಸೆಳೆಯಿತು.
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ, ಕಂದಾಯ ಇಲಾಖೆ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿಗಳು ಉದ್ಘಾಟಕರ ಆಗಮನದ ನಿರೀಕ್ಷೆಯಲ್ಲಿರುವಾಗಲೇ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸೈಕಲ್ ಮೇಲೆ ಬಂದು ಸೈಕ್ಲಾಥಾನ್‌ಗೆ ಚಾಲನೆ ನೀಡಿ ಸೈಕ್ಲಿಸ್ಟ್‌ಗಳನ್ನು ಹುರಿದುಂಬಿಸಿದರು.
ಇದರಿಂದ ಪುಳಕಿತರಾದ ಬಾಲಕರು ಶಾಲೆಗಳಿಗೆ ಹೋಗುವ ಸೈಕಲ್‌ಗಳ ಮೇಲೆ ಏರಿ ಅವರೂ ಸ್ಪರ್ಧೆಗಿಳಿದರು. ಸಾಮಾನ್ಯ ಸೈಕಲ್‌ಗಳನ್ನು ವೇಗವಾಗಿ ತುಳಿಯುತ್ತ ಭರದಿಂದಲೇ ಮುಂದೆ ಸಾಗಿ ಸಂಭ್ರಮಿಸಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಸೈಕಲ್ ಮ್ಯಾರಾಥಾನ್ ಬಸವೇಶ್ವರ ಸರ್ಕಲ್, ಗಂಜ್ ಸರ್ಕಲ್, ಓಪೆಕ್ ಆಸ್ಪತ್ರೆ, ಯರಮರಸ್, ಯಕ್ಲಾಸಪುರ, ಬೈಪಾಸ್ ರಸ್ತೆ, ರೇಣುಕಾಚಾರ್ಯ ವೃತ್ತ, ಲಿಂಗಸುಗೂರು ರಸ್ತೆ, ರೈಲ್ವೆ ಮೇಲ್ಸೇತುವೆ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮರಳಿ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣಕ್ಕೆ ಬಂದು ಸಮಾರೋಪಗೊಂಡಿತು.
ರಾಯಚೂರು ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ, ತಹಶೀಲ್ದಾರ್ ಸುರೇಶ ವರ್ಮಾ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ವೀರೇಶ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಸರ್ಜನ್ ಡಾ.ಶಂಕರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾವಂತಗೇರಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ.ಬಡಿಗೇರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರು, ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಸವರಾಜ, ಕೃಷ್ಣ ತುಂಗೆ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕೊನೆಯ ಕ್ಷಣದಲ್ಲಿ ಬದಲಾದ ಮಾರ್ಗ
ಸೈಕಲ್ ಮ್ಯಾರಾಥಾನ್‌ಗೆ ಮೊದಲು ಒಂದು ಮಾರ್ಗ ತಿಳಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆ ಮಾಡಲಾಯಿತು. ಮಾರ್ಗದಲ್ಲಿ ಎಲ್ಲಿಯೂ ಮಾರ್ಕ್ ಮಾಡಿರಲಿಲ್ಲ. ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಇಲಾಖೆಯಿಂದ ಎರಡು ಬೆಂಗಾಲು ವಾಹನಗಳನ್ನು ಕೊಡಲಾಗಿತ್ತು. ಬೈಪಾಸ್‌ನಲ್ಲಿ ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್‌ಗಳು ಅಕ್ಕಿ ಸಾಗಿಸುವ ವಾಹನಗಳು ವೇಗವಾಗಿ ಬರುತ್ತಿದ್ದ ಕಾರಣ ಸೈಕ್ಲಿಸ್ಟ್‌ಗಳು ಭಯದಲ್ಲೇ ಸೈಕ್ಲಿಂಗ್ ಮಾಡಬೇಕಾಯಿತು.
38 ನಿಮಿಷಗಳಲ್ಲಿ 20 ಕಿ.ಮೀ ಕ್ರಮಿಸಿದ ಸೈಕ್ಲಿಸ್ಟ್
ಬೆಲ್ಲಂ ಪ್ರಕಾಶ (38 ನಿಮಿಷ 30 ಸೆ) ಚಿನ್ನದ ಪದಕ ಮೈಗಲೂರು ರಾಘವೇಂದ್ರ ಗುಪ್ತಾ (39 ನಿಮಿಷ 05 ಸೆ) ಬೆಳ್ಳಿ ಪದಕ ಸಣ್ಣವೀರೇಶ ನೆಲಹಾಳ (39 ನಿಮಿಷ 35 ಸೆ)ಕಂಚಿನ ಪದಕ ಪಡೆದುಕೊಂಡರು. ವಿಜೇತರಿಗೆ ಮೊದಲ ಬಹುಮಾನವಾಗಿ ₹ 10 ಸಾವಿರ ದ್ವಿತೀಯ ಬಹುಮಾನವಾಗಿ ₹ 5 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹ 3 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು. ಶಸ್ತ್ರಚಿಕಿತ್ಸೆಗೆ ಒಳಗಾದ ಒಬ್ಬರು ಕಾಲಿನಲ್ಲಿ ರಾಡ್ ಹಾಕಿಕೊಂಡು ಬಂದಿದ್ದ ಇನ್ನೊಬ್ಬರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗೆದ್ದು ಬೀಗಿದರು.
ಪವನ ಗೌಡ ಹಾಗೂ ಮಂಜುನಾಥ (42 ನಿಮಿಷ 10 ಸೆ)ಅವರಿಗೆ ಸಮಾಧಾನಕರ ಬಹುಮಾನ ಕೊಡಲಾಯಿತು. ಮಹಿಳಾ ವಿಭಾಗದಲ್ಲಿ ವೈದ್ಯೆ ಡಾ.ಶಿಲ್ಪಾ (45 ನಿಮಿಷ 15 ಸೆ) ಒಬ್ಬರೇ ಪಾಲ್ಗೊಂಡ ಕಾರಣ ಜಿಲ್ಲಾಡಳಿತದಿಂದ ಸನ್ಮಾನಿಸಿ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಾಲಕರ ವಿಭಾಗದಲ್ಲಿ ಪಾಲ್ಗೊಂಡಿದ್ದ ಶ್ರೇಯಸ್ ಗಣೇಶ ಹಸನ್ ಮಸಬಾ ಮನಿಷ್ ರಾಹುಲ್‌ಗೆ ಪ್ರಮಾಣಪತ್ರ ವಿತರಿಸಲಾಯಿತು. ರಾಯಚೂರು ಸೈಕ್ಲಿಂಗ್ ಅಸೋಸಿಯೇಷನ್‌ನ 35 ಸೈಕ್ಲಿಸ್ಟ್‌ಗಳು ಸೇರಿ ಎಲ್ಲ ಸೈಕ್ಲಿಸ್ಟ್‌ಗಳು 20 ಕಿ.ಮೀ ಅಂತರದ ಸೈಕ್ಲಾಥಾನ್‌ನಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.