ADVERTISEMENT

ರಾಯಚೂರು: ಕುಡಿಯುವ ನೀರಿನ ಸಮಸ್ಯೆ ನಿವಾರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಆರು ತಿಂಗಳ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 23:19 IST
Last Updated 21 ಫೆಬ್ರುವರಿ 2026, 23:19 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯಲ್ಲಿ ಸಂಸದ ಜಿ.ಕುಮಾರ ನಾಯಕ ಮಾತನಾಡಿದರು. ಶಾಸಕಿ ಕರೆಮ್ಮ ನಾಯಕ, ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ನಿತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಕ್ಷು ಗಿರಿ ಉಪಸ್ಥಿತರಿದ್ದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯಲ್ಲಿ ಸಂಸದ ಜಿ.ಕುಮಾರ ನಾಯಕ ಮಾತನಾಡಿದರು. ಶಾಸಕಿ ಕರೆಮ್ಮ ನಾಯಕ, ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ನಿತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಕ್ಷು ಗಿರಿ ಉಪಸ್ಥಿತರಿದ್ದರು   

ರಾಯಚೂರು: ಸಂಸದ ಜಿ.ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯಲ್ಲಿ ಜಲಧಾರೆ ಹಾಗೂ ಜಲ ಜೀವನ್‌ ಮಿಷನ್ ಯೋಜನೆಗಳು ವಿಫಲಗೊಂಡು ಗ್ರಾಮಾಂತರ ಪ್ರದೇಶದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗಂಭೀರ ವಿಷಯ ಸದ್ದು ಮಾಡಿತು.

ಕೇಂದ್ರ ಪುರಸ್ಕೃತ ಯೋಜನೆಗಳಾದ ಜಲಧಾರೆ ಹಾಗೂ ಜಲ ಜೀವನ್‌ ಮಿಷನ್ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಗ್ರಾಮಾಂತರ ಪ್ರದೇಶದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುವು ತಪ್ಪಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ, ಅನುಷ್ಠಾನ ಏಜೆನ್ಸಿಗಳ ಸಮನ್ವಯತೆ ಕೊರತೆ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರು ಗಂಭೀರ ಆರೋಪ ಮಾಡಿದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬರುತ್ತಿಲ್ಲ. ಜಲಧಾರೆ ಹಾಗೂ ಜಲ ಜೀವನ್‌ ಮಿಷನ್ ಅನುಷ್ಠಾನಗೊಂಡರೆ 2035ರ ವರೆಗೂ ಯಾವುದೇ ಅನುದಾನ ಬರುವುದಿಲ್ಲ. ಕಾಮಗಾರಿ ಮುಗಿಯದೇ ಪಂಚಾಯಿತಿಗಳಿಗೆ ಒಪ್ಪಿಸಿದರೆ ದೊಡ್ಡ ಸಮಸ್ಯೆಯಾಗಲಿದೆ‘ ಎಂದು ಎಚ್ಚರಿಸಿದರು.

ADVERTISEMENT

‘ನಾನು ಆಡಳಿತ ಪಕ್ಷದಲ್ಲಿ ಇರಬಹುದು. ಕ್ಷೇತ್ರದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಆರಂಭಿಸಿದರೆ ಜನರೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

‘ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಹಾದು ಹೋಗಿರುವ ಭಾರತಮಾಲಾ ಹೆದ್ದಾರಿ ಪಕ್ಕ ಸರ್ವಿಸ್‌ ರಸ್ತೆ ನಿರ್ಮಾಣ ಮಾಡಿಲ್ಲ. ರೈತರು ಹೆದ್ದಾರಿ ದಾಟಲು ಪರದಾಡುತ್ತಿದ್ದಾರೆ. ಆರು ಮೀಟರ್‌ ಹೆದ್ದಾರಿ ವಿಸ್ತರಿಸಿ ಸರ್ವಿಸ್‌ ರಸ್ತೆ ಮಾಡಿಕೊಡಬೇಕು. ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತವೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸಣ್ಣನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಅವರು ಸಹ ಕಳಪೆ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ದೇವದುರ್ಗ ತಾಲ್ಲೂಕಿನಲ್ಲಿ ಕಾಯಂ ಶಿಕ್ಷಕರೇ ಇಲ್ಲ: ‘ರಾಯಚೂರು ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳಪೆ ಮಟ್ಟದ್ದಾಗಿದೆ. ದೇವದುರ್ಗ ತಾಲ್ಲೂಕಿನಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಎಲ್ಲೆಡೆ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಬೆಂಗಳೂರಲ್ಲಿ ಕುಳಿತು ನಿರ್ಧಾರ ತೆಗೆದುಕೊಂಡರೆ ಸಾಲದು ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಅರಿತು ಕ್ರಮ ಕೈಗೊಳ್ಳಬೇಕು‘ ಎಂದು ಶಾಸಕಿ ಕರೆಮ್ಮ ನಾಯಕ ಒತ್ತಾಯಿಸಿದರು.

‘ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾಗದವರನ್ನು ಅತಿಥಿ ಶಿಕ್ಷಕರನ್ನಾಗಿ ನಿಯೋಜಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣ ತರಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

‘ಹತ್ತು ವರ್ಷ ಕಾರ್ಯನಿರ್ವಹಿಸಿರುವ ಶಿಕ್ಷಕರು ಮಾತೃ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 863 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ಹೊಸದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 5,600 ಶಿಕ್ಷಕರ ನೇಮಕಕ್ಕೆ ಆದೇಶ ನೀಡಿದೆ. ಆದರೆ, ರಾಯಚೂರು ಜಿಲ್ಲೆಗೆ ಎಷ್ಟು ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಮಾಹಿತಿ ಇಲ್ಲ‘ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ.ಬಡಿಗೇರ ತಿಳಿಸಿದರು.

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರಿನ ತಜ್ಷರ ತಂಡದ ಮೂಲಕ ಅತಿಥಿ ಉಪನ್ಯಾಸಕರಿಗೆ ತರಬೇತಿ ಕೊಡಲಾಗುತ್ತಿವೆ. ಶಿಕ್ಷಕರ ಕೊರತೆ ನೀಗಿಸಲು ಹಾಗೂ ಫಲಿತಾಂಶ ಸುಧಾರಣೆಗೆ ಸಾಧ್ಯವಿರುವ ಕ್ರಮಕೈಗೊಳ್ಳಲಾಗಿದೆ‘ ಎಂದು ಜಿಲ್ಲಾಧಿಕಾರಿ ನಿತೀಶ್ ಹೇಳಿದರು.

ದಿಶಾ ಸಮಿತಿ ಸದಸ್ಯರಾದ ತಿಪ್ಪಣ್ಣ ಹಾಗೂ ಹಣಮಂತರಾಯ್‌ ಅವರು ಸಹ ಜಲಧಾರೆ, ಜಲಜೀವನ ಮಿಷನ್, ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಕ್ಷು ಗಿರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳು ತಂಡ ರಚಿಸಿಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಪರಿಶೀಲನೆ ನಡೆಸಬೇಕು. ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಿದ್ದರೆ ಮಾತ್ರ ಹಸ್ತಾಂತರ ಪ್ರಕ್ರಿಯಿಕೆ ಮುಂದುವರಿಸಬೇಕು 
- ಬಸನಗೌಡ ದದ್ದಲ್‌, ರಾಯಚೂರು ಗ್ರಾಮೀಣ ಶಾಸಕ
ರಾಯಚೂರು ಮಹಾನಗರ ವಿಸ್ತಾರವಾಗುತ್ತಿದ್ದು ರೈಲು ನಿಲ್ದಾಣ ಮೇಲ್ದರ್ಜೆಗೇರಿಸಬೇಕಿದೆ. ಸಂಚಾರ ಒತ್ತಡ ಕಡಿಮೆ ಮಾಡುವ ದಿಸೆಯಲ್ಲಿ ರಿಂಗ್‌ ರಸ್ತೆ ನಿರ್ಮಾಣ ಮಾಡುವ ಅಗತ್ಯವಿದೆ. ಇದಕ್ಕೆ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಿ ಜಿಲ್ಲಾಡಳಿತ ವರದಿ ಕೊಡಬೇಕು
- ಜಿ. ಕುಮಾರ ನಾಯಕ, ಸಂಸದ
ದೇವದುರ್ಗ ತಾಲ್ಲೂಕಿನಲ್ಲಿ ಜಲಧಾರೆ ಹಾಗೂ ಜಲ ಜೀವನ್‌ ಮಿಷನ್‌ ಯೋಜನೆಗಳು ಸಂಪೂರ್ಣ ವಿಫಲವಾಗಿದೆ. ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುವುದು ತಪ್ಪಿಲ್ಲ. ಈ ದಿಸೆಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು 
- ಕರೆಮ್ಮ ನಾಯಕ, ದೇವದುರ್ಗ ಶಾಸಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.