
ರಾಯಚೂರು: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 167, ಬೆಳಗಾವಿ- ರಾಯಚೂರು ರಾಷ್ಟ್ರೀಯ 748ಎ ಹಾಗೂ ಮಾನ್ವಿಯಿಂದ ಸಿಂಧನೂರು ವರೆಗಿನ ಹೆದ್ದಾರಿ ಕಾಮಗಾರಿ ತೆವಳುತ್ತ ಸಾಗಿರುವ ಕಾರಣ ಜಿಲ್ಲೆಯ ಜನ ವರ್ಷವಿಡೀ ತೊಂದರೆ ಅನುಭವಿಸಬೇಕಾಯಿತು.
ಹೆದ್ದಾರಿ ಮಧ್ಯದಲ್ಲಿ ವಾಹನಗಳು ಉರುಳಿ ಬಿದ್ದು ವಾಹನ ಸಂಚಾರಕ್ಕೆ ನಿರಂತರ ಸಮಸ್ಯೆಗಳು ಎದುರಾದವು. ಹೆದ್ದಾರಿ ವಿಸ್ತರಣೆಗೆ ಕಟ್ಟಡಗಳ ತೆರವು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ಕಟ್ಟಡ ಮಾಲೀಕರು ಸಹಕಾರ ನೀಡದ ಕಾರಣ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ವಿಸ್ತರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಹೆದ್ದಾರಿ ಬದಿಗಳಲ್ಲಿರುವ ಪಟ್ಟಣಗಳ ಹಾಗೂ ಗ್ರಾಮಗಳು ದೂಳಿನಿಂದಾಗಿ ಹಿಂಸೆ ಅನುಭವಿಸಿದರು. ಹಾಳಾದ ರಸ್ತೆಗಳಿಂದಾಗಿ ಅನೇಕ ರಸ್ತೆ ಅಪಘಾತಗಳು ಸಂಭವಿಸಿದವು. ರೈತರು ತಮ್ಮ ಊರಿನಿಂದ ಎಪಿಎಂಸಿಗೆ ಭತ್ತ, ಹತ್ತಿ, ತೊಗರಿ ಸಾಗಿಸಲು ಹರ ಸಾಹಸ ಪಡಬೇಕಾಯಿತು.
ಕಲ್ಯಾಣ ರಸ್ತೆ ಸಾರಿಗೆ ಸಂಸ್ಥೆಯ ಅನೇಕ ಬಸ್‌ಗಳು ಅಪಘಾತಕ್ಕೀಡಾಗಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಸಂಚಾರ ರದ್ದುಪಡಿಸಲಾಯಿತು. ಸಾರಿಗೆ ಸಂಸ್ಥೆ ಸರ್ಕಾರದತ್ತ ಬೊಟ್ಟು ಮಾಡಿ ಕುಳಿತು ಅಸಹಾಯಕತೆ ವ್ಯಕ್ತಪಡಿಸಿದರೇ ಹೊರತು ಪರ್ಯಾಯವಾಗಿ ಬೇರೆ ಬಸ್‌ಗಳನ್ನು ಓಡಿಸಲಿಲ್ಲ. ಡಿಸೆಂಬರ್ 26ರಂದುರಾಯಚೂರಿಗೆ 16 ಹೊಸ ಬಸ್ ಬಂದರೂ ಸ್ಲೀಪರ್ ಕೋಚ್ ಬಸ್‌ಗಳು ಬರಲಿಲ್ಲ.
ರೈತರನ್ನು ಕಾಡಿದ ಅತಿವೃಷ್ಟಿ: ಮುಂಗಾರು ಸಕಾಲದಲ್ಲಿ ಪ್ರವೇಶ ಮಾಡಿದರೂ ಅತಿವೃಷ್ಟಿ ರೈತರನ್ನು ಸಂಕಷ್ಟಕ್ಕೀಡು ಮಾಡಿತು. ಹಿಂಗಾರಿನಲ್ಲೂ ಮಳೆ ಅಬ್ಬರಿಸಿ ಹತ್ತಿ ಬೆಳೆಗಾರರನ್ನು ನಷ್ಟಕ್ಕೆ ದೂಡಿತು. ಭತ್ತ, ಜೋಳ, ತೊಗರಿ ಹಾಗೂ ಹತ್ತಿ ಬೆಳೆಗಾರರು ನಷ್ಟ ಅನುಭವಿಸಿದರು.
ರಾಯಚೂರು ಜಿಲ್ಲೆಯಲ್ಲಿ 800 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದರು. ರಾಯಚೂರು, ಲಿಂಗಸುಗೂರು ಹಾಗೂ ಮುದಗಲ್ ವ್ಯಾಪ್ತಿಯ ರೈತರ ಈರುಳ್ಳಿ ಅಕ್ಟೋಬರ್‌ನಲ್ಲಿ ಸುರಿದ ಅತಿವೃಷ್ಟಿಯಿಂದ ಹಾಳಾಯಿತು.
ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಭತ್ತ ಬೆಳೆಯಿತು. ಎಪಿಎಂಸಿ ಆವರಣದಲ್ಲಿ ಜಾಗವಿಲ್ಲದಂತಾಗಿ ಅಧಿಕಾರಿಗಳು ಒಂದು ದಿನ ಖರೀದಿಯನ್ನೂ ಸ್ಥಗಿತಗೊಳಿಸಬೇಕಾಯಿತು. ಕೆಲ ರೈತರಿಗೆ ಭತ್ತ ಹಾಗೂ ಹತ್ತಿ ಬೆಳೆ ಉತ್ತಮ ಆದಾಯ ತಂದುಕೊಟ್ಟಿತು.
ಹಿಂಗಾರಲ್ಲಿ ತುಂಗಭದ್ರಾ ಕಾಲುವೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ನೀರಾವರಿ ಸಲಹಾ ಸಮಿತಿ ಹೇಳಿದ ಮೇಲೆ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಆದರೆ ವರ್ಷ ಕಳೆದರೂ ಸಮಸ್ಯೆ ಕೊನೆಗಾನಲಿಲ್ಲ.
ಬೋನಿಗೆ ಬಿದ್ದ ಮೂರು ಚಿರತೆಗಳು: ರಾಯಚೂರು, ಮಾನ್ವಿ ಸೇರಿದಂತೆ ಜಿಲ್ಲೆಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಮಾಲೀಕರ ನಿದ್ದೆಗೆಡೆಸಿದ್ದ ಮೂರು ಚಿರತೆಗಳನ್ನು ಹಿಡಿದು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ವಿಜಯನಗರದ ಜೈವಿಕ ಉದ್ಯಾನಕ್ಕೆ ಸಾಗಿಸಿ ಜನ ನಿಟ್ಟೂಸಿರು ಬಿಡುವಂತೆ ಮಾಡಿದರು.
ಶಕ್ತಿನಗರ ಹಾಗೂ ಯರಗೇರಾ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕೃಷ್ಣಮೃಗಗಳು ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡಿದವು. ನದಿಗಳ ಮೂಲಕ ಕೆರೆಗಳನ್ನು ಸೇರಿದ್ದ ಮೊಸಳೆ ಮರಿಗಳನ್ನು ಸುರಕ್ಷಿತವಾಗಿ ಹಿಡಿದು ಕೃಷ್ಣಾ ನದಿಗೆ ಬಿಟ್ಟಿದ್ದು ಸಹ ಈ ವರ್ಷದ ವಿಶೇಷವಾಗಿದೆ. ರಾಯಚೂರು ನಗರದಲ್ಲಿ ಮೊಸಳೆ ಮರಿಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತು.
ಸದ್ದು ಮಾಡಿದ ಕರಾಳ ಘಟನೆಗಳು
ಮೊಲಗಳನ್ನು ಭೇಟೆಯಾಡಿದ ಶಾಸಕನ ಪುತ್ರ ಮಸ್ಕಿ ಶಾಸಕ ಆರ್.ಬಸನಗೌಡರ ಪುತ್ರ ಆರ್.ಸತೀಶಗೌಡ ಹಾಗೂ ಸಹೋದರ ಆರ್.ಸಿದ್ದನಗೌಡ ಅವರು ಯುಗಾದಿ ಹಬ್ಬದ ಅಂಗವಾಗಿ ಏಪ್ರಿಲ್ 1ರಂದು ಕಾಡು ಪ್ರಾಣಿಗಳನ್ನು ಭೇಟಿಯಾಡಿ ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ ವಿಡಿಯೊ ದಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸದ್ದು ಮಾಡಿತು. ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ಜುಲೈ 11 2020 ರಂದು ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಹಾಗೂ ಇಬ್ಬರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಮೂವರು ಆರೋಪಿಗಳಿಗೆ ಮರಣ ದಂಡನೆ ಹಾಗೂ ಒಂಬತ್ತು ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹97500 ದಂಡ ವಿಧಿಸಿ ತೀರ್ಪು ನೀಡಿದ್ದು ನ್ಯಾಯಾಲಯದ ಇತಿಹಾಸದಲ್ಲಿ ದಾಖಲಾಯಿತು. 2025 ಜುಲೈ 22 ರಂದು ಸಿರವಾರ ತಾಲ್ಲೂಕಿನ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ವಿಷಪೂರಿತ ಚವಳೆಕಾಯಿ ಪಲ್ಯೆ ಸೇವಿಸಿ ಒಂದ ಕುಟುಂಬದ ಮೂವರು ಮೃತಪಟ್ಟರು. ಸರ್ಕಾರಕ್ಕೆ ಮೋಸ ಲಿಂಗಸುಗೂರು ತಾಲ್ಲೂಕಿನ ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಬೇಕಾಗಿದ್ದ ₹1.88 ಕೋಟಿಯನ್ನು ಮಕ್ಕಳು ಹಾಗೂ ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಹಾಗೂ ಪಟ್ಟಣದ ಕೆನರಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಅಭಿವೃದ್ಧಿಯ ಆಶಾಕಿರಣ
ರಾಜ್ಯ ಸರ್ಕಾರ ರಾಯಚೂರು ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ಐಎಎಸ್ ಅಧಿಕಾರಿಯೊಬ್ಬರನ್ನು ಆಯುಕ್ತರನ್ನಾಗಿ ನೇಮಕ ಮಾಡಿದ ನಂತರ ಅಭಿವೃದ್ಧಿಯ ಆಶಾಕಿರಣ ಮೂಡಿತು. ಮಾವಿನಕೆರೆ ಅಭಿವೃದ್ಧಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗಳು ಸ್ವಲ್ಪಮಟ್ಟಿಗೆ ವೇಗ ಪಡೆದುಕೊಂಡವು. ರಾಯಚೂರು ಕೋಟೆ ಅಭಿವೃದ್ಧಿಗೂ ಚಾಲನೆ ದೊರೆಯಿತು. ಕೋಟೆ ಮುಂದಿನ ಕಂದಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಹೂಳು ತೆಗೆದು ನೀರು ಸರಾಗವಾಗಿ ಹೋಗುವಂತೆ ಮಾಡಲಾಯಿತು. ಕೆಲ ಕಡೆ ಅತಿಕ್ರಮಣ ಸಹ ತೆರವುಗೊಳಿಸಲಾಯಿತು. ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ರಾಜ್ಯ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದಲೇ ಡಿಪಿಆರ್ ಮಾಡಿಸಿ ಸ್ಮಾರಕಗಳ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟರು. ಪ್ರವಾಸೋದ್ಯಮ ಇಲಾಖೆಯಿಂದಲೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಲಾಯಿತು. ಜಿಲ್ಲಾಡಳಿತ ಕಚೇರಿಯು ಹಳೆಯದಾದ ಸಾಥ್ ಕಚೇರಿ ಕಟ್ಟಡದಿಂದ ಮುಕ್ತಿಪಡೆದು ಯಕ್ಲಾಸಪುರದಲ್ಲಿ ನಿರ್ಮಿಸಿದ ಹೊಸ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿತು. ಇದೇ ಕಾರಣಕ್ಕೆ ಕೆಲವು ರಸ್ತೆಗಳಿಗೆ ಸುಧಾರಣೆ ಕಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.