ADVERTISEMENT

ರಾಯಚೂರು ಜಿಲ್ಲಾ ಉತ್ಸವ: ಜನಮನ ಸೆಳೆದ ಕಲಾ ತಂಡಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 12:53 IST
Last Updated 5 ಫೆಬ್ರುವರಿ 2026, 12:53 IST
<div class="paragraphs"><p>ಕಲಾ ತಂಡಗಳ ಮೆರವಣಿಗೆ</p></div>

ಕಲಾ ತಂಡಗಳ ಮೆರವಣಿಗೆ

   

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಗುರುವಾರ ನಗರದ ಕರ್ನಾಟಕ ಸಂಘದ ಆವರಣದಿಂದ ಆರಂಭವಾದ ಕಲಾ ತಂಡಗಳ ಮೆರವಣಿಗೆ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಮೆರವಣಿಗೆಗೆ ಚಾಲನೆ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ ಮತ್ತು ಬಸನಗೌಡ ದದ್ದಲ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳು ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಕರ್ನಾಟಕ ಸಂಘದಿಂದ ಬಂಗಾರ ಬಜಾರ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿನ ಉತ್ದವದ ಮುಖ್ಯ ವೇದಿಕೆಯವರೆಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನಂದಿಕೋಲು ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಚಾಂಜ್ ಮೇಳ, ಗೊಂಬೆ ಕುಣಿತ, ಹಗಲು ವೇಷ, ಗೊರವ ಕುಣಿತ, ತಮಟೆ ವಾದನ, ಲಂಬಾಣಿ ನೃತ್ಯ, ಭದ್ರಕಾಳಿ ಕುಣಿತ, ಕರಡಿ ಮಜಲು ಸೇರಿದಂತೆ 20ಕ್ಕೂ ಅಧಿಕ ತಂಡಗಳಿಂದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ವೀಕ್ಷಣೆಗೆ ನೆರೆದಿದ್ದ ಜನರಿಂದ ಪ್ರಶಂಸೆ ವ್ಯಕ್ತವಾಯಿತು. ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ತಮ್ಮ ಕಲಾ ಪ್ರಾವೀಣ್ಯತೆಯನ್ನು ಪ್ರದರ್ಶಿಸಿ ಸ್ಥಳೀಯರ ಮೆಚ್ಚುಗೆ ಗಳಿಸಿದರು. ನೂರಾರು ಮಹಿಳೆಯರು ಗುಲಾಬಿ ಬಣ್ಣದ ಪೇಟ ಧರಿಸಿ ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

'ನಗರದಲ್ಲಿ ಹಲವು ವರ್ಷಗಳ ನಂತರ ಒಂದು ಅದ್ಭುತ ಮೆರವಣಿಗೆ ನಡೆಯುತ್ತಿದೆ. ನಾನಾ ರೀತಿಯ ಕಲಾವಿದರ ಪ್ರದರ್ಶನ ಕಣ್ತುಂಬಿಕೊಂಡು ಬಹಳ ಖುಷಿಯಾಗಿದೆ' ಎಂದು ವ್ಯಾಪಾರಿ ರಮೇಶ ಹರ್ಷ ವ್ಯಕ್ತಪಡಿಸಿದರು.

' ಈ ಮೆರವಣಿಗೆಯಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆಯ ಅನಾವರಣದ ಮೂಲಕ ನಮ್ಮ ಕಲೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸುವಂತಿದೆ' ಎಂದು ಬಾಗಲವಾಡ ಗ್ರಾಮದ ಶಿವಶಂಕರ ಪೊಲೀಸ್ ಪಾಟೀಲ ಹೇಳಿದರು.

ಮೆರವಣಿಗೆಯುದ್ದಕ್ಕೂ ಪೊಲೀಸ್ ಇಲಾಖೆಯ ವತಿಯಿಂದ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.