ADVERTISEMENT

ಭೀತಿ ಹೆಚ್ಚಿಸಿದ ಭೀಮಾನದಿ ಪ್ರವಾಹ: ಹಿಂದಿನ ವರ್ಷಕ್ಕಿಂತಲೂ ಮೂರುಪಟ್ಟು ಅಧಿಕ ನೀರು

ಹಿಂದಿನ ವರ್ಷಕ್ಕಿಂತಲೂ ಮೂರುಪಟ್ಟು ಅಧಿಕ ನೀರು

ನಾಗರಾಜ ಚಿನಗುಂಡಿ
Published 17 ಅಕ್ಟೋಬರ್ 2020, 19:31 IST
Last Updated 17 ಅಕ್ಟೋಬರ್ 2020, 19:31 IST
ರಾಯಚೂರು ತಾಲ್ಲೂಕಿನ ಆತ್ಕೂರ ಗ್ರಾಮದ ಕೃಷ್ಣಾನದಿ ತೀರದಿಂದ ಕುರ್ವಕಲಾ ನಡುಗಡ್ಡೆಗೆ ಸಾಗುವ ಮಾರ್ಗದಲ್ಲಿ ಪ್ರವಾಹದ ನೋಟ
ರಾಯಚೂರು ತಾಲ್ಲೂಕಿನ ಆತ್ಕೂರ ಗ್ರಾಮದ ಕೃಷ್ಣಾನದಿ ತೀರದಿಂದ ಕುರ್ವಕಲಾ ನಡುಗಡ್ಡೆಗೆ ಸಾಗುವ ಮಾರ್ಗದಲ್ಲಿ ಪ್ರವಾಹದ ನೋಟ   

ರಾಯಚೂರು: ತಾಲ್ಲೂಕಿನ ಗಡಿಭಾಗದಲ್ಲಿರುವ ಕೃಷ್ಣಾನದಿಯಲ್ಲಿ ಸಂಗಮವಾಗುತ್ತಿರುವ ಭೀಮಾನದಿಯಲ್ಲಿ ಹರಿದುಬರುವ ಭಾರಿ ಪ್ರಮಾಣದ ಪ್ರವಾಹವು ಭೀತಿ ಹುಟ್ಟುಹಾಕಿದೆ!

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್‌ನಿಂದ 8 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ ಎನ್ನುವ ಮಾಹಿತಿ ಈ ಭೀತಿಗೆ ಕಾರಣ. ಎರಡು ನದಿಗಳ ಸಂಗಮದಿಂದ ಒಟ್ಟು 9.54 ಲಕ್ಷ ಕ್ಯುಸೆಕ್‌ ಪ್ರವಾಹ ಉಂಟಾಗಲಿದೆ. ಈಗಾಗಲೇ ಶುಕ್ರವಾರದಿಂದ 5 ಲಕ್ಷ ಕ್ಯುಸೆಕ್‌ವರೆಗೂ ಪ್ರವಾಹ ಕೃಷ್ಣಾನದಿ ಮೂಲಕ ತೆಲಂಗಾಣದತ್ತ ಹರಿದು ಹೋಗುತ್ತಿದೆ. ಶನಿವಾರ ತಡರಾತ್ರಿವರೆಗೂ ಭೀಮಾನದಿಯಿಂದ 8 ಲಕ್ಷ ಕ್ಯುಸೆಕ್‌ ನೀರು ರಾಯಚೂರಿನ ಬಳಿ ಕೃಷ್ಣಾನದಿ ಸೇರಿದ ಮೇಲೆ ಪ್ರವಾಹದ ಮಟ್ಟ ಹೇಗಿರುತ್ತದೆ ಎಂಬುದು ಆತಂಕ ಹುಟ್ಟುಹಾಕಿದೆ.

ಸಾಕಷ್ಟು ವಿಸ್ತಾರ ನದಿಪಾತ್ರ ಇರುವ ಕೃಷ್ಣಾನದಿಯಲ್ಲಿ ರಾಯಚೂರು ತಾಲ್ಲೂಕಿನುದ್ದಕ್ಕೂ 2009 ಹಾಗೂ 2019 ರಲ್ಲಿ ಗರಿಷ್ಠ 9.3 ಲಕ್ಷ ಕ್ಯುಸೆಕ್‌ವರೆಗೂ ಪ್ರವಾಹ ದಾಖಲಾಗಿದೆ. ಗುರ್ಜಾಪುರ, ಡಿ.ರಾಂಪೂರ ಹಾಗೂ ಬೂರ್ದಿಪಾಡ ಗ್ರಾಮಗಳಿಗೆ ನೀರು ನುಗ್ಗಿತ್ತು. ಮುನ್ನಚ್ಚೆರಿಕೆ ವಹಿಸಿದ್ದ ಜಿಲ್ಲಾಡಳಿತವು ಮೂರು ಗ್ರಾಮಗಳ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿತ್ತು. ಕಾಳಜಿ ಕೇಂದ್ರಗಳಲ್ಲಿ ಊಟ, ಉಪಾಹಾರ ಹಾಗೂ ವಸತಿ ವ್ಯವಸ್ಥೆ ಮಾಡಿತ್ತು. ಈ ವರ್ಷ ಕೂಡಾ ಭಾರಿ ಪ್ರಮಾಣದಲ್ಲಿ ಹರಿದುಬರುತ್ತಿರುವ ಭೀಮಾನದಿ ಪ್ರವಾಹವು ಕೃಷ್ಣಾ ಪ್ರವಾಹವನ್ನು ಹೆಚ್ಚಿಸಿದೆ. ರಾಯಚೂರು ತಾಲ್ಲೂಕಿನಲ್ಲಿ ಕಳೆದ ವರ್ಷದ ರೀತಿಯಲ್ಲೇ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡುವ ಸಾಧ್ಯತೆಯನ್ನು ಜಿಲ್ಲಾಡಳಿತವು ಮನಗಂಡಿದೆ.

ADVERTISEMENT

ಜಿಲ್ಲಾಡಳಿತವು ಈಗಾಗಲೇ ಕೃಷ್ಣಾನದಿ ಕೆಳಮಟ್ಟದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಿದೆ. ಕೂಡಲೇ ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಆಗುವಂತೆ ತಿಳಿಸಿದೆ. ಆದರೆ, ಶಾಶ್ವತ ಸ್ಥಳಾಂತರದ ಬೇಡಿಕೆ ಈಡೇರಿಸುವಂತೆ ಗುರ್ಜಾಪುರ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ. 2019 ರಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಶಾಶ್ವತ ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿದ್ದ ಸಚಿವರು ಈಗ ಬರಬೇಕು. ಬೇಡಿಕೆ ಈಡೇರಿಸುವವರೆಗೂ ಗ್ರಾಮವನ್ನು ಬಿಟ್ಟು ಹೊರಹೋಗುವುದಿಲ್ಲ ಎನ್ನುತ್ತಿದ್ದಾರೆ.

ಜಿಲ್ಲಾಡಳಿತವು ನೀಡಿರುವ ಮುನ್ನಚ್ಚೆರಿಕೆ ಪ್ರಕಾರ, ಕೃಷ್ಣಾನದಿ ಪ್ರವಾಹವು ಭಾನುವಾರದಿಂದ 10 ಲಕ್ಷ ಕ್ಯುಸೆಕ್‌ಗೆ ತಲುಪಿದರೆ, ದೇವಸೂಗೂರು ಸೇತುವೆ ಮೇಲೆ ನೀರು ಸಾಧ್ಯತೆ ಇದೆ. ಕಳೆದ ವರ್ಷ ಕೃಷ್ಣಾನದಿ ಪ್ರವಾಹ 9.3 ಲಕ್ಷ ಕ್ಯುಸೆಕ್‌ಗೆ ತಲುಪಿದಾಗ ಸೇತುವೆ ಮೇಲೆ ನೀರು ನುಗ್ಗಲು ಕೆಲವೇ ಅಡಿಗಳು ಬಾಕಿ ಉಳಿದಿತ್ತು. ಮುನ್ನಚ್ಚೆರಿಕೆ ಕ್ರಮವಾಗಿ ಪೊಲೀಸರಿಂದ ಕಾವಲು ಏರ್ಪಡಿಸಲಾಗಿತ್ತು. ಹಗರಿ–ಜಲಚೆರ್ಲಾ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167)ಗೆ ಅಡ್ಡಲಾಗಿರುವ ಈ ಸೇತುವೆ ಮುಳುಗಡೆಯಾದರೆ ಹೈದರಾಬಾದ್‌–ರಾಯಚೂರು ಸಂಚಾರ ಸ್ಥಗಿತವಾಗಲಿದೆ.

ಮತ್ತಷ್ಟು ಬೆಳೆಹಾನಿ: ಪ್ರವಾಹ ಏರಿಕೆಯಿಂದಾಗಿ ಗುರ್ಜಾಪುರ, ಕಾಡ್ಲೂರು, ಗಂಜಳ್ಳಿ, ದೇವಸೂಗೂರು, ಯರಗುಂಟಾ, ಸಗಮಕುಂಟಾ, ಬೂರ್ದಿಪಾಡ, ಆತ್ಕೂರು, ಡಿ.ರಾಂಪೂರ ಗ್ರಾಮಗಳ ನದಿತೀರದ ಜಮೀನುಗಳಲ್ಲಿ ಫಲವತ್ತಾಗಿ ಬೆಳೆದಿರುವ ಭತ್ತದ ಬೆಳೆ ಮತ್ತಷ್ಟು ನೀರು ಪಾಲಾಗಲಿದೆ. ಮಳೆಯಿಂದ ಈಗಾಗಲೇ ಬೆಳೆಹಾನಿ ಅನುಭವಿಸಿರುವ ರೈತರು ಸಂಪೂರ್ಣ ನಷ್ಟಕ್ಕೊಳಗಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.