ADVERTISEMENT

ರೈತರಿಗೆ ಸುಲಭವಾಗಿ ಗೊಬ್ಬರ ಸಿಗುವಂತೆ ಮಾಡಿ: ಶಾಸಕ ಬಸನಗೌಡ ದದ್ದಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 7:33 IST
Last Updated 3 ಸೆಪ್ಟೆಂಬರ್ 2025, 7:33 IST
ರಾಯಚೂರು ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್ ಮಾತನಾಡಿದರು. ಜಯಂತರಾವ್ ಪತಂಗೆ, ಚಂದ್ರಶೇಖರ ಪವಾರ್, ಶರಣಬಸವರಾಜ ಉಪಸ್ಥಿತರಿದ್ದರು
ರಾಯಚೂರು ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್ ಮಾತನಾಡಿದರು. ಜಯಂತರಾವ್ ಪತಂಗೆ, ಚಂದ್ರಶೇಖರ ಪವಾರ್, ಶರಣಬಸವರಾಜ ಉಪಸ್ಥಿತರಿದ್ದರು   

ರಾಯಚೂರು: ‘ರೈತರಿಗೆ ಸುಲಭವಾಗಿ ಗೊಬ್ಬರ ಸಿಗುವಂತಾಗಬೇಕು. ಯಾವುದೇ ರೈತ ಸರತಿ ಸಾಲಲ್ಲಿ ನಿಂತು ಕಾಯುವಂತೆ ಆಗಬಾರದು. ಕೃಷಿ ಅಧಿಕಾರಿಗಳು ಸಮರ್ಪಕ ಗೊಬ್ಬರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚನೆ ನೀಡಿದರು.

ಇಲ್ಲಿಯ ರಾಯಚೂರು ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ಮೊದಲ ಬೆಳೆಗೆ ರಸಗೊಬ್ಬರದ ಬೇಡಿಕೆ ಹೆಚ್ಚಿರುತ್ತದೆ. ಎರಡನೇ ಬೆಳೆಗೆ ಒತ್ತಡ ಇರುವುದಿಲ್ಲ. ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ಶಿಸ್ತುಬದ್ಧವಾಗಿ ರಸಗೊಬ್ಬರ ವಿತರಣೆಗೆ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕಿ ದೀಪಾ ಎಲ್. ಮಾತನಾಡಿ, ‘ರಾಯಚೂರು ತಾಲ್ಲೂಕಿನಲ್ಲಿ ಮುಂಗಾರಿನಲ್ಲಿ
16,592 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇರುತ್ತದೆ. ಆಗಸ್ಟ್‌ ಅಂತ್ಯದ ವರೆಗೆ 12,484 ರಷ್ಟು ಗೊಬ್ಬರ ಮಾರಾಟವಾಗಿದೆ. 1994 ಮೆಟ್ರಿಕ್ ಟನ್‌ ದಾಸ್ತಾನು ಇದೆ. ಸಹಕಾರಿ ಸಂಘಗಳಿಗೆ 1737 ಮೆಟ್ರಿಕ್ ಟನ್ ಯೂರಿಯಾ ಹಾಗೂ 809 ಮೆಟ್ರಿಕ್ ಟನ್ ಡಿಎಪಿ ಹಂಚಿಕೆ ಮಾಡಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಗ್ರಾಮೀಣ ಪ್ರದೇಶದಲ್ಲಿ ತೋಟಗಾರಿಕೆ ಪ್ರದೇಶ ವಿಸ್ತರಣೆಯಾಗಬೇಕು. ತೋಟಗಾರಿಕೆ ಬೆಳೆಗಾರರಿಗೆ ಹನಿ ನೀರಾವರಿ ಸೇರಿದಂತೆ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು. ರೈತರ ಬೇಡಿಕೆಗನುಸಾರ ತೋಟಗಾರಿಕೆ ಸಸಿಗಳ ವಿತರಣೆಗೆ ಕ್ರವಹಿಸಬೇಕು’ ಎಂದು ಶಾಸಕರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

‘ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಮಾವು, ಮೊಸಂಬಿ, ಡ್ರಾಗನ್ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಒತ್ತು ಕೊಡಬೇಕು’ ಎಂದು ಹೇಳಿದರು.

‘ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 300 ಹೆಕ್ಟೇರ್‌ನಷ್ಟು ಇದ್ದ ಮಾವು ಬೆಳೆ ಪ್ರದೇಶವು ಇದೀಗ 350 ಹೆಕ್ಟೇರ್‌ನಷ್ಟು ಹೆಚ್ಚಳವಾಗಿದೆ. ಕೆಲ ರೈತರು ಪೇರಲ ಬೆಳೆಗೆ ಆಸಕ್ತಿ ತೋರಿದ್ದಾರೆ’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಸುರೇಶ ಕುಮಾರ ಮಾಹಿತಿ ನೀಡಿದರು.

ಕುಡಿಯುವ ನೀರು ಕೊಡಿ: ‘ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು. ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಆದರೂ ನದಿ ದಂಡೆಯ ಗ್ರಾಮಸ್ಥರು ನಮಗೆ ನೀರು ಸಿಗುತ್ತಿಲ್ಲ ಎನ್ನುವ ಕೂಗು ಇದೆ. ಗ್ರಾಮಸ್ಥರಿಂದ ದೂರುಗಳು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಶಾಸಕರು ಎಚ್ಚರಿಕೆ ನೀಡಿದರು.

‘ಪೈಪ್‌ಲೈನ್‌ ಸೋರುತ್ತಿದೆ ಎಂದು ಕುಂಟುನೆಪ ಹೇಳುತ್ತ ಕಾಲಹರಣ ಮಾಡಬಾರದು. ಜನರಿಗೆ ಮೊದಲು ಕುಡಿಯುವ ನೀರು ಕೊಡಬೇಕು. ಕ್ರಿಯಾಯೋಜನೆಯಲ್ಲಿ ಸೇರಿಸಿ ಅವಶ್ಯವಿರುವ ಕಡೆಗೆ ತಡಮಾಡದೆ‌ ದುರಸ್ತಿ ಕಾರ್ಯ ಆರಂಭಿಸಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮತ್ತು ಕೆಲ ಪಿಡಿಒಗಳಿಗೆ ನಿರ್ದೇಶನ ನೀಡಿದರು.

ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ: ವಿದ್ಯುತ್ ಮೀಟರ್ ಇಲ್ಲ, ಬಿಲ್ ಕಟ್ಟಿಲ್ಲ ಎಂದು ಯಾವುದೇ ಹಳೆಯ ಮನೆಗಳು ಮತ್ತು ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ವಿದ್ಯುತ್ ಕಡಿತ ಮಾಡಕೂಡದು. ಬಿಲ್ ಕಟ್ಟಿಲ್ಲ ಎಂದು ಬೀದಿದೀಪಗಳನ್ನು ಆಫ್ ಮಾಡಬಾರದು ಎಂದು ಶಾಸಕರು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ರಾಯಚೂರು ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಅಲ್ಲಿನ ಪಿಡಿಒಗಳು ಕಡ್ಡಾಯ ಧೂಮೀಕರಣ ಮಾಡಿಸಬೇಕು. ಗ್ರಾಮ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತುಕೊಡಬೇಕು’ ಎಂದು ಸೂಚಿಸಿದರು.

ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಮತ್ತು ಸಂಸ್ಕರಣ ಸಂಘದ ಅಧ್ಯಕ್ಷ ಜಯಂತರಾವ್ ಪತಂಗೆ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಪವನಕಿಶೋರ ಪಾಟೀಲ, ತಹಶೀಲ್ದಾರ್ ಸುರೇಶ ವರ್ಮಾ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಶರಣಬಸವರಾಜ, ತಾ.ಪಂ. ಇಒ ಚಂದ್ರಶೇಖರ ಪವಾರ್, ತ್ರೈಮಾಸಿಕ ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಫಾರುಕ್ ಹುಸೇನ್ ಅಬ್ದುಲ್ ಜಿಲಾನಿ, ಪಲ್ಲವಿ ಸುರೇಶ, ಈರೇಶ ರಾಮಪ್ಪ, ಜಿಂದಪ್ಪ ಶಾವಣಿ, ಶರಣಬಸವ ನಾಗಾರೆಡ್ಡಿ, ತಿಮ್ಮಪ್ಪ ನಾಯಕ, ರಾಯಚೂರು ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ, ಬಿಇಒ ಈರಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.