ರಾಯಚೂರು: ಐತಿಹಾಸಿಕ ರಾಯಚೂರು ಸಿಟಿಯನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯು ವಿಶೇಷವಾಗಿ ರೂಪಿಸಿರುವ ರಾಯಚೂರ ಕೋಟೆಗೆ ದೀಪಾಲಂಕಾರ ಯೋಜನೆಯ ಮೊದಲ ಹಂತದ ಡೆಮೊ ವೀಕ್ಷಣೆ ಮಂಗಳವಾರ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡುವ ಕೋಟೆದ್ವಾರದ ಬಳಿಯ ಎಡಗಡೆಯ ಸ್ಥಳವಾದ ಬಯಲು ಗ್ರಂಥಾಲಯದ ಆವರಣದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ವೇಳೆಗೆ ಡೆಮೊ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೋಹಾಪತ್ರ ಅವರು ಲೈಟಿಂಗ್ ವ್ಯವಸ್ಥೆಯ ಪ್ರಾತ್ಯಕ್ಷಿಕೆಯ ವೀಕ್ಷಣೆ ನಡೆಸಿದರು.
ಬೆಂಗಳೂರಿನ ವಿಧಾನಸೌಧ ಮಾದರಿಯಲ್ಲಿ ರಾಯಚೂರು ಕೋಟೆಗೆ ದೀಪಾಲಂಕಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ತಾಂತ್ರಿಕ ತಂಡಕ್ಕೆ ಸೂಚನೆ ನೀಡಿದರು.
ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ಮತ್ತು ಇನ್ನೀತರ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಹತ್ವದ ಸಂದೇಶ ಕೊಡುವ ನಿಟ್ಟಿನಲ್ಲಿ ಬಹುವರ್ಣದ ದೀಪಾಲಂಕಾರಕ್ಕಾಗಿ ಬೀಮ್ ಮೂವಿಂಗ್ ಹೆಡ್ ಲೈಟ್ಸನ ವ್ಯವಸ್ಥೆ ಮಾಡಬೇಕು ಎಂದು ತಂತ್ರಜ್ಞರಿಗೆ ಸೂಚನೆ ನೀಡಿದರು.
ನಗರದ ಶ್ರೀ ಬಸವೇಶ್ವರ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದ ಕೋಟೆ ದ್ವಾರದವರೆಗೆ ಮತ್ತು ಬಸ್ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡ ಕೋಟೆ ಗೋಡೆಗೆ ಅಂದಾಜು 400 ಲೈಟ್ ಅಳವಡಿಸಿ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಾಂತ್ರಿಕ ತಂಡದವರು ಮಾಹಿತಿ ನೀಡಿದರು.
ಡಿಎಚ್ಒ ಡಾ.ಸುರೇಂದ್ರಬಾಬು, ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಮೋಹನ ಕೃಷ್ಣ, ಮಹಾನಗರ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗ, ಸಿವಿಲ್ ವಿಭಾಗದ ಎಂಜಿನಿಯರ್ ರಮೇಶ, ಮಹೇಶ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಲೂತರ್, ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ನ ಗುರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.