ADVERTISEMENT

ಎಸ್ಸೆಸ್ಸೆಲ್ಸಿ: ರಾಯಚೂರು ಜಿಲ್ಲೆಯ ಉತ್ತಮ ಸಾಧನೆ

ಫಲಿತಾಂಶದಲ್ಲಿ 33ನೇ ಸ್ಥಾನದಿಂದ 28 ಸ್ಥಾನಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 16:05 IST
Last Updated 10 ಆಗಸ್ಟ್ 2020, 16:05 IST
ಬಿ.ಎಚ್‌. ಗೋನಾಳ, ಡಿಡಿಪಿಐ ರಾಯಚೂರು
ಬಿ.ಎಚ್‌. ಗೋನಾಳ, ಡಿಡಿಪಿಐ ರಾಯಚೂರು   

ರಾಯಚೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯು ಈ ವರ್ಷ ‘ಬಿ’ ಗ್ರೇಡ್‌ ಜಿಲ್ಲೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಉತ್ತಮ ಸಾಧನೆ ತೋರಿದೆ.

ಶೇಕಡಾವಾರು ಪಲಿತಾಂಶದ ಹೋಲಿಕೆಯಲ್ಲಿ ಜಿಲ್ಲೆಯು 28ನೇ ಸ್ಥಾನದಲ್ಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ 33 ನೇ ಸ್ಥಾನದಲ್ಲಿ ರಾಯಚೂರು ಗುರುತಿಸಿಕೊಂಡಿತ್ತು. ಕಲ್ಯಾಣ ಕರ್ನಾಟಕದಲ್ಲಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುವ ಜಿಲ್ಲೆಗಳ ಸಾಲಿನಲ್ಲಿದೆ.

ಲಿಂಗಸೂಗೂರು, ಸಿಂಧನೂರು, ಮಾನ್ವಿ ತಾಲ್ಲೂಕುಗಳು ‘ಬಿ’ ಗ್ರೇಡ್‌. ರಾಯಚೂರು ಮತ್ತು ದೇವದುರ್ಗ ತಾಲೂಕುಗಳು ‘ಸಿ’ ಗ್ರೇಡ್ ಪಡೆದಿವೆ. ಎಂದಿನಂತೆ ಈ ಸಲವೂ ಖಾಸಗಿ ಶಾಲೆಗಳಿಗೆ ಉತ್ತಮ ಫಲಿತಾಂಶ ಬಂದಿದೆ.

ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಗಂಭೀರ ಪ್ರಯತ್ನ ಮಾಡಲಾಗಿತ್ತು. 12 ವಾರಗಳ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿತ್ತು. ಈ ಪ್ರಯತ್ನವನ್ನು ಶಿಕ್ಷಣ ಸಚಿವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪೂರ್ವ ತಯಾರಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಪರೀಕ್ಷೆ ಹಿಂದಿನ ಮೂರು ತಿಂಗಳು ವಿಶೇಷ ತರಗತಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿರುವುದು ಇದೀಗ ಫಲ ನೀಡಿದೆ.

ಸಾಧನೆ ಮಾಡಿರುವ ವಿದ್ಯಾರ್ಥಿಗಳು: ಜಿಲ್ಲೆಗೆ ಮಾನ್ವಿಯ ವೆಲ್ಲಂಕಿ ರಾಮಕೃಷ್ಣ ಪ್ರೌಢ ಶಾಲೆಯ ಸೈಯದ್ ಅಮಾನುಲ್ಲಾ ಹುಸೇನಿ 620 ಅಂಕಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ರಾಯಚೂರಿನ ರಿಕಬ್‌ಚಂದ್ ಸುಖಾಣಿ ಮದರ್ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂದೀಪ ಪಾಟೀಲ್ 619 ಅಂಕಗಳೊಂದಿಗೆ ದ್ವಿತೀಯ ಸಾಧನೆ ಮಾಡಿದ್ದಾರೆ. ಇವರ ಸಹೋದರ ಸುದೀಪ ಪಾಟೀಲ ಕೂಡ 609 ಅಂಕ ಪಡೆದಿದ್ದಾರೆ. ಮಸ್ಕಿಯ ಜೋಗಿನ್ ರಾಮಣ್ಣ ಮೆಮೋರಿಯಲ್ ಪ್ರೌಢಶಾಲೆಯ ಅಭಿಷೇಕ 618 ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಲಿಂಗಸೂಗೂರಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಅರುಣ ಮ್ಯಾಗೇರಿ 617 ಅಂಕಗಳು, ಪ್ರಶಾಂತ 614 ಅಂಕಗಳನ್ನು ಪಡೆದಿದ್ದಾರೆ. ಸಿಂಧನೂರು ತಾಲ್ಲೂಕು ಮುಕ್ಕುಂದಾ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪುಲಕುಂದಾ 616 ಅಂಕಗಳನ್ನು ಗಳಿಸಿದ್ದಾರೆ. ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್‌ನ ಆದರ್ಶ ವಿದ್ಯಾಲಯದ ವಿಜಯಲಕ್ಷ್ಮಿ 614 ಅಂಕ ಪಡೆದು ಗಮನ ಸೆಳೆದಿದ್ದಾರೆ. ಇವರೆಲ್ಲ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.