
ರಾಯಚೂರು: ‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಬಿಳಿಜೋಳ ಉತ್ಪನ್ನವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಖರೀದಿ ಸಮಯದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದರು.
ಇಲ್ಲಿನ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೋಳ ಖರೀದಿ ಕುರಿತು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಮಾನದಂಡಗಳನ್ವಯ ಈಗಾಗಲೇ ನೋಂದಣಿಯಾಗಿರುವ ಅಥವಾ ನೋಂದಣಿಯಾಗುವ ರೈತರಿಂದ ಬಿಳಿಜೋಳವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು’ ಎಂದು ತಿಳಿಸಿದರು.
‘ಜೋಳ ಖರೀದಿಗೆ ಅವಶ್ಯವಿರುವ ಗೋಣಿ ಚೀಲಗಳ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಬಳಸುವ ಡಿಜಿಟಲ್ ತೂಕ ಮಾಪನ ಯಂತ್ರಗಳನ್ನು ಕಡ್ಡಾಯವಾಗಿ ಕಾನೂನು ಮಾಪಸಶಾಸ್ತ್ರ ಇಲಾಖೆಯಿಂದ ಸ್ಟ್ಯಾಂಪಿಂಗ್ ಮಾಡಿಸಿಕೊಳ್ಳಬೇಕು’ ಎಂದು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ ಮಾತನಾಡಿ, ಎಫ್‌ಸಿಐ ತನಿಖಾ ತಂಡವು ನೀಡಿರುವ ವರದಿಯಾನುಸಾರ ಹಿಂದಿನ ಸಾಲಿನಲ್ಲಿ ಹಂಚಿಕೆಯಾಗಿ ಬಳಕೆಗೆ ಯೋಗ್ಯವಿರುವ 5,53,545 ಗೋಣಿ ಚೀಲಗಳು ವಿವಿಧ ಖರೀದಿ ಕೇಂದ್ರಗಳಲ್ಲಿ ಲಭ್ಯ ಇವೆ. 2.50 ಲಕ್ಷ ಹೊ ಗೋಣಿ ಚೀಲಗಳು ಜಿಲ್ಲೆಗೆ ಹಂಚಿಕೆಯಾಗಿದ್ದು, ಅತೀ ಶಿಘ್ರದಲ್ಲಿಯೇ ಕೇಂದ್ರಗಳಿಗೆ ತಲುಪಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಜೀರ್ ಅಮಹದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚೌವಾಣ್, ಸಹಕಾರ ಸಂಘಗಳ ಉಪ ನಿಬಂಧಕರು, ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಾನ್ವಿ, ಸಿಂಧನೂರು, ಮಸ್ಕಿ, ಸಿರವಾರ ತಾಲ್ಲೂಕಿನ ತಹಶೀಲ್ದಾರರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕರು ಸೇರಿದಂತೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.