
ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಮೂರು ವರ್ಷಗಳಿಂದ ಕನ್ನಡದ ಕಾರ್ಯಕ್ರಮಗಳನ್ನು ಮಾಡದೇ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಹಾಗೂ ತನಿಖೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇಲ್ಲಿಯ ಕನ್ನಡ ಭವನದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಣ್ಣಪ್ಪ ಮೇಟಿಗೌಡ ಮಾತನಾಡಿ, ‘ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮೂರು ವರ್ಷಗಳಿಂದ ಕಸಾಪ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿಲ್ಲ. ಒಂದೇ ಸಮ್ಮೇಳನ ನಡೆಸಿದರೂ ಅದರ ಲೆಕ್ಕ ಕೊಟ್ಟಿಲ್ಲ. ಮೂರು ವರ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕನ್ನಡ ಭವನದ ಬಾಡಿಗೆ ಹಣದ ಲೆಕ್ಕವೂ ನೀಡಿಲ್ಲ. ವಾರ್ಷಿಕವಾಗಿ ಸರ್ಕಾರದಿಂದ ಬರುವ ಅನುದಾನದ ಹಣದ ಖರ್ಚು ವಿವರಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ., ಜಿಲ್ಲೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರ ನೇಮಕದಲ್ಲಿ ಕಸಾಪ ಬೈಲಾ ಉಲ್ಲಂಘನೆ ಮಾಡಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಕಿಡಿ ಕಾರಿದರು.
‘ಸಾರ್ವಜನಿಕ ಹಣ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಂಬಂಧಪಟ್ಟವರು ತನಿಖೆ ನಡೆಸಬೇಕು. ಅಲ್ಲಿಯವರೆಗೆ ಕಸಾಪ ಜಿಲ್ಲಾ ಘಟಕಕ್ಕೆ ಆಡಳಿತ ಅಧಿಕಾರಿಯನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲಾ ಅಧ್ಯಕ್ಷರ ಪರೋಕ್ಷವಾಗಿ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಗೊಡ್ಡು ಬೆದರಿಕೆಗಳಿಗೆ ಹೆದುರುವುದಿಲ್ಲ. ಕನ್ನಡದ ಅಸ್ಮಿತೆ ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದೇವೆ’ ಎಂದು ಗುಡುಗಿದರು.
ಮಾರುತಿ ಬಡಿಗೇರ ಮಾತನಾಡಿ, ‘ಜಿಲ್ಲೆಯಲ್ಲಿ ಕಸಾಪ ಸರ್ವ ಸದಸ್ಯರ ಸಭೆ ಕರೆದಿಲ್ಲ. ಕಸಾಪ ನಿಯಮ ಉಲ್ಲಂಘನೆ ಮಾಡಿ ತಾಲ್ಲೂಕು ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಕಸಾಪ ವಲಯದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ದೇವದುರ್ಗ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕನ್ನಡ ಕಾರ್ಯಕ್ರಮಗಳು ಸಂಪೂರ್ಣ ಸ್ಥಗಿತಗೊಂಡಿವೆ’ ಎಂದು ದೂರಿದರು.
ಒಕ್ಕೂಟದ ಸದಸ್ಯ ಎಂ.ಆರ್. ಬೇರಿ ಮಾತನಾಡಿ, ‘ನಮ್ಮ ಹೋರಾಟ ಕಸಾಪ ಹಾಗೂ ಕನ್ನಡದ ವಿರುದ್ದ ಅಲ್ಲ: ಭ್ರಷ್ಟರ ವಿರುದ್ಧದ ಹೋರಾಟವಾಗಿದೆ. ದುರ್ಬಲ ಜಿಲ್ಲಾಧ್ಯಕ್ಷರಿಂದಾಗಿ ಕಸಾಪದಲ್ಲಿ ಗೊಂದಲ ಹೆಚ್ಚಿದೆ. ನಾಡು, ನುಡಿಯ ರಕ್ಷಣೆಗಿಂತ ಕನ್ನಡ ವಿರೋಧ ಚಟುವಟಿಕೆಗಳು ಹೆಚ್ಚುತ್ತಿವೆ‘ ಆಕ್ರೋಶ ವ್ಯಕ್ತಪಡಿಸಿದರು.
‘ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರು ಹೋರಾಟಗಾರರಿಗೆ ಧಮ್ಕಿ ಹಾಕುವುದನ್ನು ಮೊದಲು ನಿಲ್ಲಿಸಬೇಕು. ಅಧ್ಯಕ್ಷರ ಬೆದರಿಕೆಗೆ ಹೆದರಿ ಗೂಡು ಸೇರುವ ರಕ್ತ ನಮ್ಮದಲ್ಲ. ಭ್ರಷ್ಟರಿಗೆ ಬುದ್ಧಿ ಕಲಿಸಲು ಹೋರಾಟ ತೀವ್ರಗೊಳಿಸುತ್ತೇವೆ‘ ಎಂದು ಎಚ್ಚರಿಸಿದರು.
‘ಜಿಲ್ಲಾ ಕಸಾಪ ಕಲಾವಿದರು, ಸಾಹಿತಿಗಳು, ಸಂಘಟಕರು ಹಾಗೂ ಕನ್ನಡಪರ ಹೋರಾಟಗಾರರನ್ನು ಮರೆತಿದೆ. ಶೀಘ್ರ ಕ್ರಮ ಕೈಗೊಂಡು ಕನ್ನಡ ಚಟುವಟಿಕೆಗಳಿಗೆ ಜೀವ ತುಂಬಬೇಕು’ ಎಂದು ಜಾನ್ ವೆಸ್ಲಿ ಮನವಿ ಮಾಡಿದರು.
‘ಜಿಲ್ಲಾ ಘಟಕದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿಲ್ಲ. ಉದ್ದೇಶ ಪೂರ್ವಕವಾಗಿ ಕಸಾಪದಿಂದ ಮಹಿಳೆಯರನ್ನು ದೂರವಿಡುವ ಪ್ರಯತ್ನಗಳು ನಡೆದಿವೆ. ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವ ಕಾರಣ ರಂಗಣ ಪಾಟೀಲ ತಕ್ಷಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ವಿಜಯರಾಣಿ ಒತ್ತಾಯಿಸಿದರು.
ಅಂಬಾಜಿ ರಾವು, ಆನಂದ ಸ್ವಾಮಿ, ರಾಜಶೇಖರ ಮಾಚರ್ಲಾ, ಮಸೂದ್ ಅಲಿ, ವಂಶಿಕೃಷ್ಣ, ಮೌನೇಶ ವಡವಟ್ಟಿ, ಮಹೇಶ, ಸಂಗಮೇಶ, ಬಸವರಾಜ್, ವೆಂಕಟೇಶ, ಕೃಷ್ಣ, ಆಂಜನೇಯ, ಕುರುಬದೊಡ್ಡಿ, ರಾಮಕೃಷ್ಣ ಪ್ರಸಾದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.