ADVERTISEMENT

ರಾಯಚೂರು | ಆನ್‌ಲೈನ್‌ ಗೇಮ್‌ನಲ್ಲಿ ₹ 70 ಲಕ್ಷ ಕಳೆದುಕೊಂಡ ಮ್ಯಾನೇಜರ್

ಕುಟುಂಬ ದಿವಾಳಿ, ಸಂಬಂಧಿಕರನ್ನು ಸಾಲದ ಕೂಪಕ್ಕೆ ತಳ್ಳಿದ ಚಟ

ಚಂದ್ರಕಾಂತ ಮಸಾನಿ
Published 11 ಡಿಸೆಂಬರ್ 2025, 22:14 IST
Last Updated 11 ಡಿಸೆಂಬರ್ 2025, 22:14 IST
ಆನ್‌ಲೈನ್‌ ಗೇಮಿಂಗ್ ಸಾಂದರ್ಭಿಕ ಚಿತ್ರ
ಆನ್‌ಲೈನ್‌ ಗೇಮಿಂಗ್ ಸಾಂದರ್ಭಿಕ ಚಿತ್ರ   

ರಾಯಚೂರು: ಸೈಬರ್ ಅಪರಾಧ ತಡೆಗೆ ಸೈಬರ್‌ ಅಪರಾಧ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಇವತ್ತಿಗೂ ಗಂಭೀರವಾಗಿಲ್ಲ. ಜಿಲ್ಲೆಯ ಹಣಕಾಸು ಸಂಸ್ಥೆಯೊಂದರ ವ್ಯವಸ್ಥಾಪಕರೊಬ್ಬರು ಅಧಿಕ ಹಣ ಗಳಿಸುವ ಆಸೆಯಲ್ಲಿ ಆನ್‌ಲೈನ್‌ ಗೇಮ್‌ನಲ್ಲಿ ಒಟ್ಟು ₹ 70.19ಲಕ್ಷ ಕಳೆದುಕೊಂಡು ದಿವಾಳಿಯಾಗಿದ್ದು, ಸಂಬಂಧಿಕರನ್ನೂ ಸಾಲದ ಕೂಪಕ್ಕೆ ತಳ್ಳಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಬ್ಯಾಂಕ್‌ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ವ್ಯವಸ್ಥಾಪಕರು ಅಲರ್ಟ್‌ ಮೆಸೇಜ್‌ಗಾಗಿ ಒಂದೇ ಮೊಬೈಲ್‌ ನಂಬರ್‌ ಲಿಂಕ್‌ ಮಾಡಿಸಿದ್ದರು. ಅನ್‌ಲೈನ್‌ ಗೇಮಿಂಗ್ ಮೋಹಕ್ಕೆ ಒಳಗಾಗಿ ಇದೀಗ ಎಲ್ಲ ಹಣವನ್ನೂ ಕಳೆದುಕೊಂಡು ಬೆತ್ತಲಾಗಿದ್ದಾರೆ.

2024ರ ಜೂನ್‌ನಲ್ಲಿ ಮೊಬೈಲ್‌ನಲ್ಲಿ ಸಹಜವಾಗಿಯೇ ರೀಲ್ಸ್‌ ನೋಡುತ್ತಿದ್ದಾಗ ಫನ್‌ ಎಕ್ಸ್‌ಚೈಂಚ್ ಹೆಸರಿನ ಜಾಹೀರಾತು ಬಂದಿತ್ತು. ಅದರ ಮೇಲೆ ಕ್ಲಿಕ್‌ ಮಾಡಿದ ಮೇಲೆ ಸೈನ್‌ ಇನ್‌ ಕೇಳಿದೆ. ಅಲ್ಲಿ ಹಲವು ಗೇಮ್‌ಗಳು ತೆರೆದುಕೊಂಡಾಗ ‘ಎವಿಯಟರ್‌‘ ಎನ್ನುವ ಗೇಮ್‌ ವಿಮಾನ ಮಾದರಿಯಲ್ಲಿ ಮೇಲಕ್ಕೆ ಕೆಳಕ್ಕೆ ಹಾರಾಡಿದೆ. ವಿಮಾನ ಹಾರಿದರೆ ಹೆಚ್ಚಿನ ಹಣ ಬರುತ್ತಿತ್ತು, ವಿಮಾನ ಕೆಳಗೆ ಇಳಿದರೆ ಕಡಿಮೆ ಹಣ ಬರುತ್ತಿತ್ತು. ವಿಮಾನ ಪತನವಾದರೆ ಶೂನ್ಯ ಕಾಣಿಸುತ್ತಿತ್ತು. ಯಾವುದೇ ಹಣ ಬರುತ್ತಿರಲಿಲ್ಲ. ವಂಚನೆ ಕಥೆ ಇಲ್ಲಿಂದಲೇ ಶುರುವಾಯಿತು.

ADVERTISEMENT

ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಣ ಬಂದಂತೆ ಆಗಿದೆ. ಇದರಿಂದಾಗಿ ವ್ಯವಸ್ಥಾಪಕರಿಗೆ ಮೋಸಗಾರರ ಮೇಲೆ ನಂಬಿಕೆಯೂ ಹೆಚ್ಚಾಗಿದೆ. ಅಧಿಕ ಹಣ ತೊಡಗಿಸಿದ ನಂತರ ಡಿಸೆಂಬರ್ 2ರಂದು ಗೇಮ್‌ ಸೈಟ್‌ನಲ್ಲಿ ಇದ್ದ ಲಾಗಿನ್‌ ಖಾತೆ ಇದ್ದಕ್ಕಿದ್ದಂತೆಯೇ ಬ್ಲಾಕ್‌ ಆಯಿತು. ಸಂಬಂಧಪಟ್ಟವರನ್ನು ಸಂಪರ್ಕಿಸಲು ಅಲ್ಲಿ ಯಾವುದೇ ನಂಬರ್‌ ಸಹ ಇರಲಿಲ್ಲ. ನಂತರ ಅವರಿಗೆ ತಾನು ಮೋಸ ಹೋಗಿರುವುದು ಮನವರಿಕೆಯಾಗಿದೆ.

2024ರ ಜೂನ್‌ 2ರಿಂದ 2025ರ ನವೆಂಬರ್ 1ರ ವರೆಗೆ 70,19,123 ಕಳೆದುಕೊಂಡು ಕಂಗಾಲಾಗಿ ವ್ಯವಸ್ಥಾಪಕರು ಎನ್‌ಸಿಆರ್‌ಪಿ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕರು ಆನ್‌ಲೈನ್‌ ಗೇಮ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಹಣ ಗಳಿಕೆ ಆಸೆಗಾಗಿ ಕುಟುಂಬವನ್ನು ಸಂಕ್ಷಷ್ಟಕ್ಕೆ ದೂಡಬಾರದು
ವೆಂಕಟೇಶ ಹೊಗಿಬಂಡಿ, ಸೈಬರ್‌ಕ್ರೈಂ ಡಿವೈಎಸ್‌ಪಿ

ಹಣದ ಆಸೆ: ಮುರಿದ ಮದುವೆ

ಬಿಕಾಂ ಪದವಿಧರರಾಗಿರುವ 28 ವರ್ಷದ ಈ ಯುವಕ ಖಾಸಗಿ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆಗೆ ಒಬ್ಬನೇ ಮಗ. ನಾಲ್ವರು ಸಹೋದರಿಯರು ಇದ್ದು ಇವರೇ ಕಿರಿಯವರು. ಸಹೋದರಿಯರು ಹಾಗೂ ಗೆಳೆಯರಿಂದಲೂ ಸಾಲ ಪಡೆದು ಆನ್‌ಲೈನ್‌ನಲ್ಲಿ ಹಣ ತೊಡಗಿಸಿದ್ದರು. ಆನ್‌ಲೈನ್‌ ಗೇಮಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡಿರುವ ಮಾಹಿತಿ ಲಭ್ಯವಾದ ನಂತರ ಗೆಳೆಯರು ಹಣಕ್ಕೆ ಪಟ್ಟು ಹಿಡಿದ್ದರು. ಹೀಗಾಗಿ ಸಾಲ ತೀರಿಸಲು ಒಂದೂವರೆ ಎಕರೆ ಕೃಷಿ ಜಮೀನು ಮಾರಾಟ ಮಾಡಿದ್ದಾರೆ. ಬ್ಯಾಂಕ್‌ ಮ್ಯಾನೇಜರ್ ಇದ್ದ ಕಾರಣ ಮದುವೆ ನಿಶ್ಚಯವಾಗಿತ್ತು. ಇದೀಗ ವಧುವಿನ ಪಾಲಕರು ಮದುವೆ ರದ್ದುಗೊಳಿಸಿದ್ದಾರೆ. ಯುವತಿ ಸಹ ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.