ADVERTISEMENT

ರಾಯಚೂರು: ತಾಯಿ ಮಕ್ಕಳ ಆಸ್ಪತ್ರೆ: ವರ್ಷದಲ್ಲಿ 1,203 ಹೆರಿಗೆ

ಚಂದ್ರಕಾಂತ ಮಸಾನಿ
Published 20 ಆಗಸ್ಟ್ 2025, 6:54 IST
Last Updated 20 ಆಗಸ್ಟ್ 2025, 6:54 IST
ರಾಯಚೂರು ಹೈದರಾಬಾದ್‌ ರಸ್ತೆ ಸಮೀಪದ ನಗರದ ತಾಯಿ ಮಕ್ಕಳ ಆಸ್ಪತ್ರೆ
ರಾಯಚೂರು ಹೈದರಾಬಾದ್‌ ರಸ್ತೆ ಸಮೀಪದ ನಗರದ ತಾಯಿ ಮಕ್ಕಳ ಆಸ್ಪತ್ರೆ   

ರಾಯಚೂರು: ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನವೇ ಉದ್ಘಾಟನೆಯಾಗಿದ್ದ ನಗರದ ತಾಯಿ ಮಕ್ಕಳ ಆಸ್ಪತ್ರೆ ಒಂದು ವರ್ಷದಲ್ಲೇ 1,203 ಮಹಿಳೆಯರ ಸುರಕ್ಷಿತ ಹೆರಿಗೆ ಮಾಡಿಸಿ ಉತ್ತಮ ಸಾಧನೆ ತೋರಿದೆ.

ಸುಸಜ್ಜಿತ ಹೆರಿಗೆ ಕೊಠಡಿ, ಅತ್ಯಾಧುನಿಕ ಉಪಕರಣಗಳು, ತಜ್ಞ ವೈದ್ಯರನ್ನು ಹೊಂದಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಒಂದು ವರ್ಷದ ಅವಧಿಯಲ್ಲಿ 681 ಸಹಜ ಹೆರಿಗೆಗಳು ಮತ್ತು ಶಸ್ತ್ರಚಿಕಿತ್ಸೆ ಮೂಲಕ 522 ಹೆರಿಗೆಗಳನ್ನು ಮಾಡಲಾಗಿದೆ.

225 ಚೊಚ್ಚಲು ಗರ್ಭಿಣಿ, 145 ಸೆ.ಮೀಗಿಂತ ಕಡಿಮೆ ಎತ್ತರ, ಅಧಿಕ ರಕ್ತದೊತ್ತಡ, ಅವಳಿ ಜವಳಿ ಭ್ರೂಣ ಹೊಂದಿದ ಮಹಿಳೆ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವ, ಮೊದಲ ಹೆರಿಗೆ ಸಿಸೇರಿಯನ್ ಆಗಿರುವ ಪ್ರಕರಣಗಳು ಸೇರಿ ಕ್ಲಿಷ್ಟಕರ 225 ಗರ್ಭಿಣಿಯರ ಹೆರಿಗೆ ಮಾಡಲಾಗಿದೆ.

ADVERTISEMENT

ಮಕ್ಕಳ ಬೆಳವಣಿಗೆಯ ನ್ಯೂನ್ಯತೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರಬಾಬು ತಿಳಿಸಿದರು.

ಪ್ರಸ್ತುತ ನಾಲ್ವರು ಪ್ರಸೂತಿ ತಜ್ಞರು, ಮೂವರು ಮಕ್ಕಳ ತಜ್ಞರು ಇದ್ದಾರೆ. ರೇಡಿಯಾಲಜಿಸ್ಟ್ ಡಾ ಪ್ರಜ್ವಲಕುಮಾರ ಆಡಳಿತ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ತಜ್ಞ ವೈದ್ಯರು, ಸ್ನಾತ್ತಕೋತ್ತರ ವೈದ್ಯ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಹೆರಿಗೆ ನಿರ್ವಹಣೆ, ಮಕ್ಕಳ ಆರೈಕೆ ಚಿಕಿತ್ಸೆಗೆ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ.

ಪ್ರತಿ ತಿಂಗಳು 9 ಹಾಗೂ 24 ತಾರೀಖಿನ ದಿನ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗಂಡಾಂತರ ಸ್ಥಿತಿಯಲ್ಲಿರುವ ಗರ್ಭಿಣಿಯರು ಸೇರಿದಂತೆ ಎಲ್ಲ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಪ್ರಸೂತಿ ತಜ್ಞರ ನೇತೃತ್ವದಲ್ಲಿ ಹೆರಿಗೆ ದಿನಾಂಕ, ಮಗುವಿನ ಬೆಳವಣಿಗೆ, ಕಬ್ಬಿಣಾಂಶ ಮಾತ್ರೆಗಳ ಸೇವನೆ, ಪೌಷ್ಟಿಕಾಹಾರ ಮಹತ್ವ ಕುರಿತು ತಿಳಿವಳಿಕೆ ನೀಡಲಾಗುತ್ತದೆ. ಮೂವರು ನುರಿತ ಮಕ್ಕಳ ತಜ್ಞರ ಮೂಲಕ ಹೆರಿಗೆ ನಂತರ ಮಕ್ಕಳಿಗೆ ಕಂಡು ಬರಬಹುದಾದ ಯಾವುದೇ ಆರೋಗ್ಯ ಸಮಸ್ಯೆಗಳಿಗೆ, ಮಕ್ಕಳ ಇತರ ಆರೋಗ್ಯದ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 465 ಮಕ್ಕಳಿಗೆ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ ನಂದಿತಾ ಎಂ. ಎನ್. ಹೇಳುತ್ತಾರೆ.

ತಾಯಂದಿರು ಹಾಗೂ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಜೊತೆಗೆ ತಾಯಿ ಮರಣ, ಶಿಶು ಮರಣ ತಡೆಗೆ ಒತ್ತುಕೊಡಲಾಗಿದೆ. ಹೀಗಾಗಿ ಬಡ ಹಾಗೂ ಸಾಮಾನ್ಯ ಕುಟುಂಬದ ಮಹಿಳೆಯರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಇಷ್ಟಪಡುತ್ತಿದ್ದಾರೆ.

ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ 100ನೇ ಮಹಿಳೆಗೆ ಸಾಮಾನ್ಯ ಹೆರಿಗೆ ಮಾಡಿಸಿದ ಸಂಭ್ರಮದಲ್ಲಿ ವೈದ್ಯಕೀಯ ತಂಡ
ಮಹಿಳೆ ಗರ್ಭಧರಿಸಿದ ಆರಂಭದ ತಿಂಗಳುಗಳಲ್ಲೇ ಆಸ್ಪತ್ರೆಗೆ ತಪಾಸಣೆಗಾಗಿ ಬರುವುದರಿಂದ ತಾಯಿ ಮಗುವಿನ ಆರೋಗ್ಯದ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ
ಡಾ.ನಂದಿತಾ ಎಂ. ಎನ್. ಜಿಲ್ಲಾ ಆರ್‌ಸಿಎಚ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.