ADVERTISEMENT

ರಸ್ತೆ ಸುಧಾರಣೆ, ಸಮುದಾಯ ಭವನಕ್ಕೆ ಅನುದಾನ ಖರ್ಚು

2021–22ನೇ ಸಾಲಿನ ₹1 ಕೋಟಿ ಅನುದಾನ ಈಗಾಗಲೇ ಹಂಚಿಕೆ

ನಾಗರಾಜ ಚಿನಗುಂಡಿ
Published 18 ಅಕ್ಟೋಬರ್ 2021, 14:49 IST
Last Updated 18 ಅಕ್ಟೋಬರ್ 2021, 14:49 IST
ರಾಯಚೂರಿನ ಚಂದ್ರಯ್ಯಗೌಡ ಹೆರೂರು ಕಾಲೇಜಿನಲ್ಲಿ ಶಾಸಕರ ಪ್ರಾದೇಶಾಭಿವೃದ್ಧಿ ನಿಧಿಯಲ್ಲಿ ನೂತನ ಕೊಠಡಿ ಕಾಮಗಾರಿಗೆ ಶಾಸಕ ಡಾ.ಶಿವರಾಜ ಪಾಟೀಲ ಈಚೆಗೆ ಪೂಜೆ ನೆರವೇರಿಸಿದರು (ಸಂಗ್ರಹ ಚಿತ್ರ)
ರಾಯಚೂರಿನ ಚಂದ್ರಯ್ಯಗೌಡ ಹೆರೂರು ಕಾಲೇಜಿನಲ್ಲಿ ಶಾಸಕರ ಪ್ರಾದೇಶಾಭಿವೃದ್ಧಿ ನಿಧಿಯಲ್ಲಿ ನೂತನ ಕೊಠಡಿ ಕಾಮಗಾರಿಗೆ ಶಾಸಕ ಡಾ.ಶಿವರಾಜ ಪಾಟೀಲ ಈಚೆಗೆ ಪೂಜೆ ನೆರವೇರಿಸಿದರು (ಸಂಗ್ರಹ ಚಿತ್ರ)   

ರಾಯಚೂರು: ಜಿಲ್ಲಾ ಕೇಂದ್ರದ ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಮತದಾರರು 2013 ರಿಂದ ಸತತ ಎರಡನೇ ಬಾರಿ ಡಾ.ಶಿವರಾಜ ಪಾಟೀಲ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. 2018 ರಲ್ಲಿ ಬಿಜೆಪಿ ಚಿಹ್ನೆಯಡಿ ಗೆಲುವು ಸಾಧಿಸಿದ ಅವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ ಸರ್ಕಾರ ಬಿಡುಗಡೆಗೊಳಿಸಿದ ನಿಧಿಯನ್ನು ಯಾವ ಕಾಮಗಾರಿಗಳಿಗೆ ಬಳಕೆ ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ.

2017 ರಿಂದ ಇದುವರೆಗೂ 2020 ರವರೆಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿಗಾಗಿ ಒಟ್ಟು ₹8 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು, ಅದರಲ್ಲಿ ₹73.3 ಕೋಟಿ ಅನುದಾನವನ್ನು ಶಾಸಕರು ವಿವಿಧ ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದಾರೆ. ಅನುದಾನವನ್ನು ಬಹುತೇಕ ವಿವಿಧೆಡೆ 90 ಸಿಸಿ ರಸ್ತೆ (ಮೆಟಲ್‌ ರಸ್ತೆ)ಗಳ ನಿರ್ಮಾಣಕ್ಕಾಗಿ, 55 ಕಡೆಗಳಲ್ಲಿ ರಸ್ತೆ ಸುಧಾರಣೆಗಾಗಿ ಬಳಕೆ ಮಾಡಲಾಗಿದೆ. ಅಲ್ಲದೆ, ದೇವಸ್ಥಾನಗಳಿಗೆ ಸಂಬಂಧಿಸಿದ ಹಾಗೂ ವಿವಿಧ ಸಮುದಾಯಗಳಿಗೆ ಸೇರಿದ 48 ಸಮುದಾಯ ಭವನಗಳಿಗೆ ಒಟ್ಟು ₹1.32 ಕೋಟಿ ಅನುದಾನ ಒದಗಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಶಾಸಕರ ಅನುದಾನದಲ್ಲಿ ಒಟ್ಟು 340 ಕಾಮಗಾರಿಗಳನ್ನು ಕೈಗೊಂಡಿದ್ದು, ಬಹುತೇಕ ಪೂರ್ಣವಾಗಿವೆ. ಕ್ಷೇತ್ರದ ವ್ಯಾಪ್ತಿಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಕೊಠಡಿ ಮತ್ತು ಡೆಸ್ಕ್‌ ಖರೀದಿಗಾಗಿ ಒಟ್ಟು ₹57.4 ಲಕ್ಷ ಅನುದಾನ ಕೊಟ್ಟಿದ್ದರೆ, ದೇವಸ್ಥಾನಗಳ ನಿರ್ಮಾಣಕ್ಕಾಗಿ ₹16 ಲಕ್ಷ ವೆಚ್ಚವಾಗಿದೆ. ಜಿಮ್‌ ಕೇಂದ್ರಗಳಿಗೆ ಒಟ್ಟು ₹5 ಲಕ್ಷ, ಸಿಸಿ ರಸ್ತೆ ಮತ್ತು ರಸ್ತೆ ಸುಧಾರಣೆಗೆ ಸುಮಾರು ₹4 ಕೋಟಿ ಅನುದಾನ ವ್ಯಯಿಸಲಾಗಿದೆ.

ADVERTISEMENT

2017–18ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ₹2 ಕೋಟಿ ಪೈಕಿ ₹191 ಲಕ್ಷ ಬಿಡುಗಡೆ ಮಾಡಲಾಗಿದೆ. ಒಟ್ಟು 56 ಕಾಮಗಾರಿಗಳಿಗೆ ಅನುದಾನ ಹಂಚಿದ್ದು, 30 ರಸ್ತೆ ಸುಧಾರಣೆ, 12 ಸಮುದಾಯ ಭವನಗಳಿಗೆ, ಎಂಟು ಕಡೆಗಳಲ್ಲಿ ಕಲ್ವರ್ಟ್‌/ಚರಂಡಿ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ಬಹುತೇಕ ಕಾಮಗಾರಿಗಳಿಗೆ ತಲಾ ಗರಿಷ್ಠ ₹2.5 ಲಕ್ಷ ಅನುದಾನ ಕೊಟ್ಟಿದ್ದಾರೆ. ಪಂಚಾಯತ್‌ರಾಜ್‌ ಇಲಾಖೆಯು ಕಾಮಗಾರಿ ನಿರ್ವಹಣೆ ಮಾಡಿದೆ.

2018–19ನೇ ಸಾಲಿನ ಶಾಸಕರ ನಿಧಿ ₹2 ಕೋಟಿಯಲ್ಲಿ 68 ಕಾಮಗಾರಿಗಳಿಗೆ ಒಟ್ಟು ₹190 ಲಕ್ಷ ಬಿಡುಗಡೆ ಮಾಡಲಾಗಿದೆ. ಮಲಿಯಾಬಾದ್‌ ಗೋಶಾಲೆ ಹಿಂದಿನ ಹಿಂದಿನ ಗೇಟ್‌ನಿಂದ ಗುಡ್ಡ ಮೇಲಿನ ದೇವಸ್ಥಾನಕ್ಕೆ ಮೆಟಲ್‌ ರಸ್ತೆ ನಿರ್ಮಾಣ ಸೇರಿದಂತೆ 30 ಕಡೆಗಳಲ್ಲಿ ರಸ್ತೆ ನಿರ್ಮಾಣ ಹಾಗೂ 17 ಕಡೆಗಳಲ್ಲಿ ರಸ್ತೆ ಸುಧಾರಣೆ ಮಾಡಲಾಗಿದೆ. ಮೂರು ದೇವಸ್ಥಾನಗಳ ಕಾಮಗಾರಿಗೆ ತಲಾ ₹2.5 ಲಕ್ಷ ಹಾಗೂ ಮಠವೊಂದಕ್ಕೆ ₹2.5 ಲಕ್ಷ ಅನುದಾನ ಕೊಟ್ಟಿದ್ದಾರೆ. ಸೋಡಿಯಂ ಲೈಟ್‌ ಅಳವಡಿಸುವುದಕ್ಕೂ ಹಾಗೂ ಖಾಸಗಿ ಶಾಲೆಗೆ ಕೊಠಡಿ ನಿರ್ಮಿಸಿಕೊಳ್ಳುವುದಕ್ಕೂ ₹17.5 ಲಕ್ಷ ಶಾಸಕರ ನಿಧಿ ವ್ಯಯಿಸಲಾಗಿದೆ.

2019–20ನೇ ಸಾಲಿನ ಶಾಸಕರ ನಿಧಿ ₹2 ಕೋಟಿಯಲ್ಲಿ ಇದುವರೆಗೂ ₹186 ಲಕ್ಷ ಬಿಡುಗಡೆ ಮಾಡಲಾಗಿದ್ದು, ವಿವಿಧೆಡೆ 49 ಸಿಸಿ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಎಂಟು ಕಡೆಗಳಲ್ಲಿ ರಸ್ತೆ ಸುಧಾರಣೆ, ಎರಡು ಶಾಲೆಗಳಿಗೆ ತಲಾ ₹2.5 ಲಕ್ಷ ಅನುದಾನದಲ್ಲಿ ಡೆಸ್ಕ್‌ಗಳನ್ನು ನೀಡಲಾಗಿದೆ. ಎರಡು ದೇವಸ್ಥಾನಗಳ ಕಾಮಗಾರಿಗೆ ತಲಾ ₹2.5 ಲಕ್ಷ ಹಾಗೂ ಆರು ಸಮುದಾಯ ಭವನಗಳಿಗೆ ಒಟ್ಟು ₹17.4 ಲಕ್ಷ ಅನುದಾನ ಒದಗಿಸಿದ್ದಾರೆ.

2020–21 ನೇ ಸಾಲಿನ ₹2 ಕೋಟಿ ಅನುದಾನದಲ್ಲಿ 18 ಕಡೆಗಳಲ್ಲಿ ಸಮುದಾಯ ಭವನಗಳಿಗೆ ಅನುದಾನ, ಒಂದು ಕಡೆ ಕೋಬಲ್‌ ಸ್ಟೋನ್‌ ಅಳವಡಿಕೆ, ಆರ್ಚ್‌ ನಿರ್ಮಾಣ ಸೇರಿ ಒಟ್ಟು 54 ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ.

2021–22ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಮೊದಲ ಕಂತು ₹1 ಕೋಟಿ ಅನುದಾನ ಒದಗಿಸಿದ್ದು, ಶಾಸಕರು ಈಗಾಗಲೇ ವಿವಿಧ ಕಾಮಗಾರಿಗಳಿಗೆ ಹಂಚಿಕೆ ಮಾಡಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.