ADVERTISEMENT

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸರ್ಕಾರದಿಂದ ಅನುದಾನ ಯತ್ನ: ಸಚಿವ

ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 15:21 IST
Last Updated 18 ಜೂನ್ 2019, 15:21 IST
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಮಂಗಳವಾರ ಆಯೋಜಿಸಿದ್ದ 2.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಚಾಲನೆ ನೀಡಿದರು
ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಮಂಗಳವಾರ ಆಯೋಜಿಸಿದ್ದ 2.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಚಾಲನೆ ನೀಡಿದರು   

ರಾಯಚೂರು: ವಿಶೇಷ ಆಚರಣೆಯಾಗಿ ಪ್ರಸಿದ್ಧಿ ಪಡೆದಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸರ್ಕಾರದಿಂದಲೂ ಅನುದಾನ ದೊರಕಿಸಲು ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಭರವಸೆ ನೀಡಿದರು.

ನಗರದ ರಾಜೇಂದ್ರಗಂಜ್‌ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಮೂರನೇ ದಿನವಾದ ಮಂಗಳವಾರ ಆಯೋಜಿಸಿದ್ದ ಎತ್ತುಗಳಿಂದ 2.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಮುನ್ನೂರು ಕಾಪು ಸಮಾಜ 19 ವರ್ಷಗಳಿಂದ ಈ ಹಬ್ಬವನ್ನು ಆಯೋಜಿಸುತ್ತಿರುವುದು ಉತ್ತಮವಾದ ಆಚರಣೆಯೂ ಆಗಿದೆ. ಮುಂದಿನ ವರ್ಷದ ಆಚರಣೆಗೆ ಸರ್ಕಾರದಿಂದ ಅನುದಾನ ಮೀಸಲಿಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಮುಂದಿನ ವರ್ಷದಿಂದ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಈ ಕಾರ್ಯಕ್ರಮಕ್ಕೆ ಹಿಂದನ ಸರ್ಕಾರಗಳಿಂದ ಆರ್ಥಿಕ ಸಹಾಯ ದೊರೆಯಬೇಕಿತ್ತು. ಜೂನ್ 26ರಂದು ಸಮಾಜದ ನಿಯೋಗ ಬಂದರೆ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಬರುವ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಲಾಗುವುದು ಎಂದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಉತ್ಸವಗಳನ್ನು ಆಚರಣೆ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬ ಹೊರತುಪಡಿಸಿದರೆ ಯಾವುದೇ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆದಿಲ್ಲ. ಆದ್ದರಿಂದ ಈ ಹಬ್ಬವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುವಂತಾಗಬೇಕು ಎಂದು ತಿಳಿಸಿದರು.

ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎಷ್ಟೇ ಕಷ್ಟಗಳಿದ್ದರೂ ರೈತರ ಹಬ್ಬಗಳನ್ನು ನಿಲ್ಲಿಸಬಾರದು. ದೇಶಿ ಸಂಸ್ಕೃತಿ ಬಿಂಬಿಸುವ ಈ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.

ತಾಲ್ಲೂಕಿನ ಚಿಕ್ಕಸುಗೂರು ಚೌಕಿಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಕ್ಷೇತ್ರ ಕೈವಾರ ಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಂ, ನಾರಾಯಣಪೇಟೆ ಶಾಸಕ ಎಸ್.ಆರ್.ರೆಡ್ಡಿ ಮಾತನಾಡಿದರು.

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಎ.ಪಾಪಾರೆಡ್ಡಿ, ಸಮಾಜದ ಜಿಲ್ಲಾ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಖಂಡರಾದ ಎಂ.ವಿರೂಪಾಕ್ಷಿ, ಮಹಾಂತೇಶ ಪಾಟೀಲ, ಕೇಶವರೆಡ್ಡಿ, ಈ.ಆಂಜನೇಯ, ಚಾಮರಸ ಮಾಲಿಪಾಟೀಲ, ಶಿವಶಂಕರ, ಲಕ್ಷ್ಮಣಗೌಡ ಕಡಗಂದೊಡ್ಡಿ, ಯು.ದೊಡ್ಡ ಮಲ್ಲೇಶ, ಶ್ರೀನಿವಾಸ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.