ADVERTISEMENT

ರಾಯಚೂರು: ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತೀವ್ರ ವಿರೋಧ

ನಾಗರಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ–ಸಂಸ್ಥೆಗಳ ಸಭೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:11 IST
Last Updated 28 ಜನವರಿ 2026, 6:11 IST
ರಾಯಚೂರಿನ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಭಾಂಗಣದಲ್ಲಿ ಕರೆದಿದ್ದ ವಿವಿಧ ಸಂಘ–ಸಂಸ್ಥೆಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು
ರಾಯಚೂರಿನ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಭಾಂಗಣದಲ್ಲಿ ಕರೆದಿದ್ದ ವಿವಿಧ ಸಂಘ–ಸಂಸ್ಥೆಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು   

ರಾಯಚೂರು: ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿವೆ.

ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ನೇತೃತ್ವದಲ್ಲಿ ಇಲ್ಲಿಯ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಭಾಂಗಣದಲ್ಲಿ ಕರೆದಿದ್ದ ವಿವಿಧ ಸಂಘ–ಸಂಸ್ಥೆಗಳ ಸಭೆಯಲ್ಲಿ ಮುಖಂಡರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು.

ಎರಡು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ರಾಯಚೂರಿನ ಜನ ನಲುಗಿ ಹೋಗಿದ್ದಾರೆ. ಜಿಲ್ಲಾ ಕೇಂದ್ರದಿಂದ ಕೇವಲ 20 ಕಿ.ಮೀ ಅಂತರದಲ್ಲಿರುವ ಶಕ್ತಿನಗರದಲ್ಲಿ ಘಟಕ ಸ್ಥಾಪನೆ ಮಾಡಿದರೆ ಹೆಚ್ಚಿನ ಅನಾಹುತಗಳು ಸಂಭವಿಸಲಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಆಸ್ಪದ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ADVERTISEMENT

ಒಳಾಂತರದಲ್ಲಿ ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪಿಸುವ ಹುನ್ನಾರವನ್ನು ಸಭೆ ಸರ್ವಾನುಮತದಿಂದ ತೀವ್ರವಾಗಿ ಖಂಡಿಸಿದ್ದಲ್ಲದೆ, ಅಣು ವಿದ್ಯುತ್ ಸ್ಥಾವರ ನಮಗೆ ಬೇಡವೇ ಬೇಡ ಎಂದು ಒಕ್ಕೊರಲಿನ ತೀರ್ಮಾನಕ್ಕೆ ಬರಲಾಯಿತು.

ಕೇಂದ್ರ ತಂಡದ ಅಧಿಕಾರಿಗಳು ಆರ್‌ಟಿಪಿಎಸ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಹೋಗಿರುವ ಮಾಹಿತಿ ಇದೆ. ಆದರೆ, ಕೇಂದ್ರದ ತಂಡ ಆರ್‌ಟಿಪಿಎಸ್‌ಗೆ ಬಂದು ಹೋಗಿರುವ ಮಾಹಿತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಹೇಳಿಕೆ ಕೊಟ್ಟಿದ್ದಾರೆ. ಒಂದು ವೇಳೆ ಕೇಂದ್ರ ಅನುಮತಿ ಕೇಳಿದರೂ ಸರ್ಕಾರ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮಖಂಡರು ತಿಳಿಸಿದರು.

ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ರಾಯಚೂರು ನಗರದ ಸಂಘ–ಸಂಸ್ಥೆಗಳು, ಪರಿಸರ ಪ್ರೇಮಿಗಳು, ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಮುಖಂಡರು ಮನವಿ ಮಾಡಿದರು.

ಅಗತ್ಯವೆನಿಸಿದರೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಿಗೂ ಮನವಿ ಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಯಿತು.

ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲೇಶ್ ಅಮರ್ಖೇಡ್, ರಾಯಚೂರು ಜಿಲ್ಲಾ ನಾಗರಿಕ ವೇದಿಕೆಯ ಬಸವರಾಜ ಕಳಸ, ಎಸ್.ಮಾರಪ್ಪ ವಕೀಲ, ಅಶೋಕಕುಮಾರ ಜೈನ್, ಜಾನ್ ವೆಸ್ಲಿ, ರೈತ ಸಂಘದ ಚಾಮರಸ ಮಾಲಿಪಾಟೀಲ, ಮಲ್ಲಣ್ಣ ದಿನ್ನಿ, ಅನಿತಾ ಮಂತ್ರಿ, ನಿವೇದಿತಾ, ಆರ್‌ಟಿಪಿಎಸ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನಿ, ಆದಿಲ್, ಥಾಮಸ್, ಜಮಾತೆ ಇಸ್ಲಾಮಿ ಹಿಂದ್‌ನ ಅಸಿಮುದ್ದೀನ್ ಅಕ್ತರ್, ಸಮದ್ ಪಾಷಾ, ಸಿಪಿಐಎಂನ ಎಚ್.ಪದ್ಮ, ಕೆ.ಜಿ.ವೀರೇಶ್, ಏಮ್ಸ್ ಹೋರಾಟ ಸಮಿತಿಯ ಶ್ರೀನಿವಾಸ್ ಜೋಶಿ, ಪ್ರಸನ್ನ ಆಲಮ್ಪಲ್ಲಿ, ನರಸಪ್ಪ ಬಾಡಿಯಾಳ್, ಸಾದಿಕ್ ಖಾನ್, ವಿನಯಕುಮಾರ ಚಿತ್ರಗಾರ, ಅಮರೇಗೌಡ ಪಾಟೀಲ, ಎಸ್.ಹನುಮಂತಪ್ಪ, ಕಾಮರಾಜ್ ಪಾಟೀಲ, ಆಂಜನೇಯ ಕುರುಬದೊಡ್ಡಿ, ಶ್ರೀನಿವಾಸ್ ಕಲವಲ ದೊಡ್ಡಿ, ಎನ್.ಮಹಾವೀರ್, ಮಹಮ್ಮದ್ ಇಸಾಕ್, ಭೀಮನಗೌಡ ಇಟಗಿ, ವೆಂಕಟರೆಡ್ಡಿ ದಿನ್ನಿ, ದೇವಸೂಗೂರಿನ ವೀರೇಶಕುಮಾರ, ಪ್ರಕಾಶಯ್ಯ ನಂದಿ, ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯರಾಜೇಂದ್ರ, ರಾಹುತ್ ರಾವ್, ವೆಂಕಟೇಶ ಬೇವಿನ ಬೆಂಚಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ವೀರೇಶ ಸೋನಾ, ಸುರೇಶ್, ಗ್ರೀನ್ ರಾಯಚೂರಿನ ಎಂ.ಗಣೇಶ್, ಗುರುರಾಜ್ ಪನ್ನೂರ್, ಅಶ್ವಥ್ ರಾವ್, ಬಸವರಾಜ್ ಮಿಮಿಕ್ರಿ, ರಾಮಣ್ಣ ಮೇದಾರ್, ಶಶಿಕಲಾ ಭೀಮರಾಯ, ಕರ್ನಾಟಕ ಜನಶಕ್ತಿಯ ಜಿ. ಹನುಮಂತ ಬಂಗಾರಿ ನರಸಿಂಹ, ರಂಗಾರೆಡ್ಡಿ, ಮಾರಪ್ಪ ಹರವಿ, ಲಕ್ಷ್ಮಣ ಮಂಡಲಗೇರ, ಪ್ರಭು ನಾಯಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.