ಸಾಂದರ್ಭಿಕ ಚಿತ್ರ
ರಾಯಚೂರು: ‘ನೋಂದಾಯಿಸಿದ ಪದ್ಧತಿಯಲ್ಲೇ ವೈದ್ಯಕೀಯ ವೃತ್ತಿ ನಡೆಸದ 14 ಖಾಸಗಿ ಕ್ಲಿನಿಕ್‌ಗಳಿಗೆ ಜಿಲ್ಲಾಡಳಿತದಿಂದ ನೋಟೀಸ್ ಜಾರಿ ಮಾಡಲಾಗಿದೆ’ ಎಂದು ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆಗಳ ನಿವಾರಣೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿತೀಶ್.ಕೆ
ತಿಳಿಸಿದ್ದಾರೆ.
ಕರ್ನಾಟಕ ವೈದ್ಯಕೀಯ ಮಂಡಳಿ ಅಥವಾ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಬೋರ್ಡ್‌ಗಳಿಂದ ಪ್ರಮಾಣ ಪತ್ರ ಪಡೆಯದೇ ವೈದ್ಯ ವೃತ್ತಿ ಮಾಡುತ್ತಿರುವವರನ್ನು ನಕಲಿ ವೈದ್ಯರು ಎಂದು ಪರಿಗಣಿಸಬೇಕಾಗುತ್ತದೆ. ತಾಲ್ಲೂಕು ಮಟ್ಟದ ಸಮಿತಿಗಳಿಂದ ಪರಿಶೀಲನೆ ವೇಳೆಯಲ್ಲಿ ನಕಲಿ ವೈದ್ಯರು ಎಂದು ಗೊತ್ತಾಗಿ ಅಂತಹ ಯಾರಾದರೂ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ ಮತ್ತು ಆಸ್ಪತ್ರೆ ನಡೆಸಿದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಪಿಎಂಇ ಕಾಯ್ದೆಯಡಿ ಚಿಕಿತ್ಸಾಲಯವನ್ನು ನೋಂದಾಯಿಸದ ಮತ್ತು ಬೇರೆ ನಮೂದಿಸಿದ ಪದ್ಧತಿ ಬಿಟ್ಟು ಬೇರೆ ಪದ್ಧತಿಯಲ್ಲಿ ಚಿಕಿತ್ದೆ ನೀಡುತ್ತಿರುವ, ಅನುಮತಿ ಇಲ್ಲದೇ ಎಕ್ಸರೆ ಮಾಡುವ ಬಗ್ಗೆ ಪರಿಶೀಲನೆ ವೇಳೆಯಲ್ಲಿ ಗೊತ್ತಾಗಿದೆ ಎಂದು ಹೇಳಿದ್ದಾರೆ.
ದೇವದುರ್ಗ ತಾಲ್ಲೂಕಿನ 10 ಖಾಸಗಿ ಕ್ಲಿನಿಕ್‌ಗಳು, ಸಿರವಾರ ಹಾಗೂ ಮಾನ್ವಿ ತಾಲ್ಲೂಕಿನ ತಲಾ ಎರಡು ಖಾಸಗಿ ಕ್ಲಿನಿಕ್‌ಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ ಬಗ್ಗೆ ಜುಲೈ 10ರಂದು ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
‘ಖಾಸಗಿ ಕ್ಲಿನಿಕ್‌ಗಳ ಮೇಲೆ ನಿಯಮಾನುಸಾರ ದಂಢವಿದಿಸಿ ಕ್ರಮವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಪಿಎಂಇ ಕಾಯ್ದೆ ಅನುಸಾರ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದ್ದಾರೆ.
ತಾಲ್ಲೂಕು ಮಟ್ಟದಲ್ಲಿ ಕೆಪಿಎಂಇ ಕಾಯ್ದೆಯಡಿ ವಿಧಿಸಲಾದ ಷರತ್ತುಗಳನ್ವಯ ಕಾಲಕಾಲಕ್ಕೆ ತಪಾಸಣೆ ಮಾಡಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಮತ್ತು ಐಎಂಎ ತಾಲ್ಲೂಕು ಘಟಕದ ಅಧ್ಯಕ್ಷರು, ಎಎಫ್‌ಐ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು ಸಮಿತಿಯ ಸದಸ್ಯರಾಗಿದ್ದಾರೆ. ಈ ತಂಡವು ಪ್ರತಿ ತಿಂಗಳು ಸುಮಾರು 10 ಸಂಸ್ಥೆಗಳಿಗೆ ಭೇಟಿ ನೀಡಿ ಕೆಪಿಎಂಇ ಕಾಯ್ದೆಯನ್ವಯ ಕಾರ್ಯನಿರ್ವಹಿ ಸುತ್ತಿರುವ ಬಗ್ಗೆ ಹಾಗೂ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ನೀಡುತ್ತಿರುವುದರ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.