ADVERTISEMENT

ಗ್ರಾಮಗಳಲ್ಲಿ ಕೋವಿಡ್‌ ಜಾಗೃತಿಗೆ ಸಲಹೆ

ರಾಯಚೂರು ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 15:14 IST
Last Updated 13 ಮೇ 2021, 15:14 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಶಾಸಕರಾದ ಬಸನಗೌಡ ದದ್ದಲ ಹಾಗೂ ಡಾ.ಶಿವರಾಜ ಪಾಟೀಲ ಅವರು ರಾಯಚೂರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಗುರುವಾರ ನಡೆಸಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಶಾಸಕರಾದ ಬಸನಗೌಡ ದದ್ದಲ ಹಾಗೂ ಡಾ.ಶಿವರಾಜ ಪಾಟೀಲ ಅವರು ರಾಯಚೂರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಗುರುವಾರ ನಡೆಸಿದರು   

ರಾಯಚೂರು: ಕೋವಿಡ್-19 ಸೋಂಕು ಹರಡದಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಜನರಲ್ಲಿರುವ ಆತಂಕ ದೂರ ಮಾಡಬೇಕು ಎಂದು ಶಾಸಕ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಗುರುವಾರ ಆಯೋಜಿಸಿದ್ದ ರಾಯಚೂರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ವಹಿಸಬೇಕಾದ ಎಚ್ಚರಿಕೆ ಕುರಿತು ವ್ಯಾಪಕ ಅರಿವು ಮೂಡಿಸಬೇಕು. ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರು ಪ್ರತಿದಿನ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ 100 ಜನರಿಗೆ ಲಸಿಕಾಕರಣ ಮಾಡುವಂತಹ ಗುರಿ ಇಟ್ಟುಕೊಳ್ಳಬೇಕು. ವಿಶೇಷವಾಗಿ 45 ರಿಂದ 59 ವಯಸ್ಸಿನ ಎಲ್ಲ ಹಿರಿಯ ನಾಗರಿಕರಿಗೆ ತಪ್ಪದೆ ಕೋವಿಡ್ ಲಸಿಕೆ ನೀಡಲು ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

ಗ್ರಾಮೀಣ ಭಾಗದಲ್ಲಿ ಕೆಲವರಿಗೆ ಲಸಿಕೆಯ ಬಗ್ಗೆ ಇರುವ ಆತಂಕವನ್ನು ಹೋಗಲಾಡಿಸಿ, ಲಸಿಕೆಯನ್ನು ಪಡೆಯುವಂತೆ ಅವರ ಮನವೊಲಿಸಬೇಕಿದೆ. ಆಯಾ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಸಭೆ ಜರುಗಿಸಿ, ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ, ನಿಗದಿತ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ನೆರವಾಗಬೇಕು. ಇದಕ್ಕಾಗಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ಶಾಸಕ ಡಾ. ಶಿವರಾಜ ಪಾಟೀಲ ಮಾತನಾಡಿ, ಕೊರೊನಾ ಹರಡದಿರಲು ಕೆಲವು ಸುರಕ್ಷತಾ ವಿಧಾನಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನ್ಯತಾ ಮನೆಯಿಂದ ಹೊರಬರಬಾರದು, ಈ ಕುರಿತು ಗ್ರಾಮಾಂತರ ಭಾಗಗಳಲ್ಲಿ ಹೆಚ್ಚು ತಿಳಿವಳಿಕೆ ನೀಡಬೇಕು. ಮುನ್ನೆಚ್ಚರಿಕೆ ಸಂಬಂಧ ಆದೇಶ ಪಾಲನೆ ಮಾಡದೇ ಇರುವವರ ವಿರುದ್ಧ ದಂಡ ವಿಧಿಸುವ ಹಾಗೂ ನಿಯಮಾನುಸಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.