ADVERTISEMENT

ರಾಯಚೂರು ಜಿಲ್ಲಾ ಉತ್ಸವ: ಕಣ್ಣಾಲೆ ತೇವಗೊಳಿಸಿದ ‘ಬಾಡಿದ ಬದುಕು’

ಕಲೆಯ ಮಹತ್ವ ಸಾರಿದ ಬಯಲಾಟಗಳು, ಜನರ ತಲೆದೂಗಿಸಿದ ತಬಲಾ ವಾದನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:01 IST
Last Updated 7 ಫೆಬ್ರುವರಿ 2026, 4:01 IST
<div class="paragraphs"><p>ರಾಯಚೂರು ಜಿಲ್ಲಾ ಉತ್ಸವದಲ್ಲಿ ಕಲಾವಿದ ಸುದರ್ಶನ ಅಸ್ಕಿಹಾಳ ತಬಲಾ ನುಡಿಸುತ್ತಿರುವುದು</p></div>

ರಾಯಚೂರು ಜಿಲ್ಲಾ ಉತ್ಸವದಲ್ಲಿ ಕಲಾವಿದ ಸುದರ್ಶನ ಅಸ್ಕಿಹಾಳ ತಬಲಾ ನುಡಿಸುತ್ತಿರುವುದು

   

ರಾಯಚೂರು: ಮನರಂಜನೆ ಮುಖ್ಯವಾಗಿರುವ ಅಧುನಿಕ ಯುಗದಲ್ಲಿ ಸಂಬಂಧಗಳನ್ನು ಹೇಗೆ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ‘ಬಾಡಿದ ಬದುಕು’ ನಾಟಕ ಅನಾವರಣಗೊಳಿಸಿತು.

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಗರದ ರಂಗಮಂದಿರದಲ್ಲಿ ಶುಕ್ರವಾರ ನಾಟಕೋತ್ಸವ ಮತ್ತು ಬಯಲಾಟ ಕಾರ್ಯಕ್ರಮ ನಡೆಯಿತು.

ADVERTISEMENT

ಮಕ್ಕಳಿಬ್ಬರು ಸರ್ಕಾರಿ ಹುದ್ದೆ ಪಡೆದು, ಮದುವೆಯಾಗಿ, ತಂದೆ–ತಾಯಿಯನ್ನು ಬಿಟ್ಟು ಹೋದಾಗ ಆಘಾತದಿಂದ ತಾಯಿ ಜೀವ ಬಿಡುತ್ತಾರೆ. ತಂದೆಯು ಜೀವನದಲ್ಲಿ ಜುಗುಪ್ಸೆಗೊಂಡು ಹುಚ್ಚನಾಗುವ ಸನ್ನಿವೇಶದಿಂದ ಕೊನೆಗೊಳ್ಳುವ, ನರಸಪ್ಪ ಡಿಂಗರಿ ನಿರ್ದೇಶನದ ನಾಟಕ ‘ಬಾಡಿದ ಬದುಕು’ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸಿತು.

ಹರಿಕೃಷ್ಣ ಖಾಶಿಮಪ್ಪ ರಾಯಚೂರು ಅವರ ನಿರ್ದೇಶನದ ಬಯಲು ನಾಟಕ ಮತ್ತು ರಂಗಪ್ಪ ತಡಕಲ್ ಮಾನ್ವಿ ನಿರ್ದೇಶನದ ದೇವಿಕಥೆ, ದೇವಿಯು ದುಷ್ಟ ಶಕ್ತಿ ಸಂಹರಿಸುವ ದೃಶ್ಯಗಳು, ಯುವಕರಿಗೆ ಬಯಲಾಟ ಮಾಡಲು ಎಷ್ಟು ಶ್ರಮಬೇಕು ಎಂಬುದನ್ನು ಮನಗಾಣಿಸಿತು.

ಚಂದ್ರಕಾಂತ ರಾಯಚೂರು ನಿರ್ದೇಶನದ ‘ದಾನವೀರ ಶೂರ ಕರ್ಣ’ ನಾಟಕವು ನಾವು ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂದು ಯಾಕೆ ಹೇಳುತ್ತಾರೆ ಎಂಬುದನ್ನು ಮನದಟ್ಟು ಮಾಡಿತು.

ತಬಲಾ ವಾದಕ ಸುದರ್ಶನ ಅಸ್ಕಿಹಾಳ ಅವರು ಅರ್ಧ ಗಂಟೆ ನಿರಂತರ ತಬಲಾ ವಾದನ, ಜಿಂಕೆ ನಡಿಗೆ, ಶಿವನ ಶಂಖನಾದದ ಮೂಲಕ ಪ್ರೇಕ್ಷಕರ ಮನಕ್ಕೆ ಮುದ ನೀಡಿದರು.

ಜಗದೀಶ ಮಾನ್ವಿ ಹಾಗೂ ತಂಡದಿಂದ ಜನಪದ ಹಾಡುಗಳು, ಕೃಷ್ಣಪ್ಪ ರಾಯಚೂರು, ಸಣ್ಣ ವೆಂಕಟೇಶ ರಾಯಚೂರು, ಈಶ್ವರಯ್ಯ ಆಪಲದಿನ್ನಿ ನಿರ್ದೇಶನದ ಬಯಲಾಟಗಳು, ಚಂದ್ರಕಾಂತ ರಾಯಚೂರು ಅವರ ನಾಟಕ, ಎಚ್.ಮಹಾದೇವ ನಿರ್ದೇಶನದ ಸಾಮಾಜಿಕ ನಾಟಕ, ಗುರುದೇವು ಮನೆ (ಜ್ಯೂ.ರಾಜ್‌ಕುಮಾರ್‌) ಅವರ ಏಕಾಭಿನಯ, ಬಸವರಾಜ ಅವರು ಮಿಮಿಕ್ರಿ, ಭೀಮಸೇನ್ ರಾಯಚೂರು ಅವರು ಭಕ್ತಿಗೀತೆ ಹಾಡಿ ದರು. 

ರಾಯಚೂರು ಜಿಲ್ಲಾ ಉತ್ಸವದಲ್ಲಿ ನಡೆದ ಬಯಲಾಟದ ದೃಶ್ಯ
ಎರಡು ವರ್ಷಗಳಿಂದ ಬಯಲಾಟದ ಪಾತ್ರಗಳನ್ನು ಮಾಡುತ್ತಿದ್ದು ಜಿಲ್ಲಾ ಉತ್ಸವದಲ್ಲಿ ಅವಕಾಶ ನೀಡಿದ್ದರಿಂದ ಮುಂದೆ ಹೆಚ್ಚಿನ ಬಯಲಾಟಗಳನ್ನು ಮಾಡಲು ಪ್ರೇರಣೆಯಾಗಿದೆ
ಪ್ರಕಾಶ ಕರೆಗುಡ್ಡ ಮಾನ್ವಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.