
ರಾಯಚೂರು: ರಾಯಚೂರು ಉತ್ಸವಕ್ಕೆ ಇನ್ನೂ ಐದು ದಿನ ಬಾಕಿ ಇದೆ. ಆದರೆ, ಮಕ್ಕಳ ಉತ್ಸವಕ್ಕೆ ಎರಡೇ ದಿನ ಉಳಿದಿದೆ. ಹಬ್ಬದಲ್ಲಿ ಮಕ್ಕಳನ್ನು ನಲಿಸಲೆಂದೇ ನಾಗರಗಾಳಿಯ ಕಾಡುಕೋಣ, ಬಂಡಿಪುರದ ಕಾಡಾನೆ, ಬಿಸಿಲು ನಾಡಿನ ಚಿರತೆಗಳು ಸೇರಿ ವನ್ಯಜೀವಿಗಳ ದಂಡೇ ಎಡೆದೊರೆ ನಾಡಿಗೆ ಬಂದಿದೆ.
ಹೌದು! ನಗರದ ವಾಲ್ಕಟ್ ಮೈದಾನದಲ್ಲಿ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ 3600 ಚದರ ಅಡಿ ಜಾಗದಲ್ಲಿ ನಿರ್ಮಿಸಲಾಗಿರುವ ಕೃತಕ ಅರಣ್ಯದಲ್ಲಿನ ಕೊಳದ ಸುತ್ತಮುತ್ತ ವನ್ಯಜೀವಿಗಳು ಬಿಡಾರ ಹೂಡಿವೆ.
ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳು ರಾಯಚೂರು ತಾಲ್ಲೂಕಿನ ಯರಗೇರಾ ಹಾಗೂ ಜಂಬಲದಿನ್ನಿ ನರ್ಸರಿಯಿಂದ 1,600 ವರೆಗೆ ವಿವಿಧ ಬಗೆಯ ಸಸಿಗಳನ್ನು ತಂದಿಟ್ಟು ವನ್ಯಜೀವಿಗಳ ವಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇಲ್ಲಿಗೆ ಬರುತ್ತಿರುವ ಮಕ್ಕಳು ಹಾಗೂ ಸಾರ್ವಜನಿಕರು ಬೆರಗುಗಣ್ಣಿನಿಂದ ವನ್ಯಜೀವಿಗಳನ್ನು ವೀಕ್ಷಿಸಿ ಆನಂದಿಸುತ್ತಿದ್ದಾರೆ.
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಲ್ಲಿಗೆ ಬಂದಿರುವ ಎಲ್ಲವೂ ಕೃತಕ ವನ್ಯಜೀವಿಗಳಾಗಿವೆ. ಕಲಾವಿದನ ಕೈಚಳಕದಿಂದಾಗಿ ಥರ್ಮಕೋಲ್‌ನಲ್ಲಿ ಜೀವ ಪಡೆದುಕೊಂಡಿವೆ. ಮೈಸೂರಿನಿಂದ ರಾಯಚೂರಿಗೆ ಬಂದಿರುವ ನಾಲ್ವರು ಕಲಾವಿದರ ತಂಡ ಥರ್ಮಾಕೋಲ್‌ನಲ್ಲಿ ಬೃಹದಾಕಾರದ ಕಾಡಕೋಣ, ಕಾಡಾನೆ, ಹುಲಿ, ಚಿರತೆ, ಕೃಷ್ಣಮೃಗ ಹಾಗೂ ಜಿಂಕೆಯ ಪ್ರತಿಕೃತಿ ತಯಾರಿಸಿ ಅದಕ್ಕೆ ಅಂದದ ಬಣ್ಣಬಳಿದು ಜೀವ ತುಂಬಿದ್ದಾರೆ. ಹೀಗಾಗಿ ಎಂಥವರನ್ನೂ ಅವು ಬೆರಗುಗೊಳಿಸುತ್ತವೆ.
ಥರ್ಮಕೋಲ್‌ನಲ್ಲಿ ನಿರ್ಮಿಸಿದ ಮೊಸಳೆ ಆಹಾರಕ್ಕಾಗಿ ಕೊಳದ ದಂಡೆಯ ಮೇಲೆ ಹೊಂಚು ಹಾಕಿ ಕುಳಿತಂತಿದೆ. ಹೆಬ್ಬಾವು ಯಾವುದೋ ಒಂದು ಪ್ರಾಣಿಯನ್ನು ನುಂಗಿ ತಣ್ಣಗೆ ಹುಲ್ಲು ಹಾಸಿನ ಮೇಲೆ ಮಲಗಿದೆ. ಮರದ ಪೊಟರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕೇರೆ ಹಾವು ಸರ ಸರನೇ ಹೊರಗೆ ಬರುತ್ತಿದೆ. ಹುತ್ತವೊಂದರಲ್ಲಿ ನಾಗರಹಾವು ಹೆಡೆ ಬಿಚ್ಚಿ ನಿಂತಿದೆ. ಕಾಡಿಗೆ ಬಂದವರು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು ಎನ್ನುವ ಸಂದೇಶ ಸಾರುವಂತಿದೆ.
ಕೃತಕ ಅರಣ್ಯದ ಪ್ರವೇಶ ದ್ವಾರದಲ್ಲಿ ಪರಿಸರ ಸಂರಕ್ಷಣೆ, ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಯ ತಿಳಿವಳಿಕೆ ನೀಡುವ ಆಕರ್ಷಕ ಉಬ್ಬು ಶಿಲ್ಪ ನಿರ್ಮಿಸಲಾಗಿದೆ. ಅದರ ಮುಂದೆಯೇ ಸಸಿಗಳನ್ನು ಜೋಡಿಸಿಡಲಾಗಿದೆ. ಕೃತಕ ವನ್ಯಜೀವಿಗಳು ಬಸವೇಶ್ವರ ವೃತ್ತದ ಬಳಿಯ ರೈಲು ನಿಲ್ದಾಣ ಮಾರ್ಗದಲ್ಲಿ ಸಾಗುವ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ.
‘ಮೈಸೂರಿನ ಕಲಾವಿದರ ತಂಡವು ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಕಲ್ಪನೆಯನ್ನು ಕಲೆ ಹಾಗೂ ಕಲಾಕೃತಿಗಳ ಮೂಲಕ ಅನಾವರಣಗೊಳಿಸಿದೆ. ಡಿಸೆಂಬರ್ 23ಕ್ಕೆ ರಾಯಚೂರಿಗೆ ಬಂದು ಕಲಾಕೃತಿಯ ಕೆತ್ತನೆಯಲ್ಲಿ ತೊಡಗಿದ್ದೇವೆ. ಶೇ 95ರಷ್ಟು ಕೆಲಸ ಮುಗಿದಿದೆ. ಶನಿವಾರ ಸಂಜೆ ವೇಳೆಗೆ ಕೃತಕ ಅರಣ್ಯ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಲಿದೆ’ ಎಂದು ಮೈಸೂರಿನ ಕಲಾವಿದ ಮಹಾದೇವ ಸ್ವಾಮಿ ಹೇಳಿದರು.
‘ದೊಡ್ಡ ಗಾತ್ರದ ಥರ್ಮಕೋಲ್‌ಗಳನ್ನು ನಾವು ದೊಡ್ಡ ಲಾರಿಯಲ್ಲಿ ಮೈಸೂರಿನಿಂದ ಇಲ್ಲಿಗೆ ತಂದು ಇಲ್ಲಿಯೇ ವನ್ಯಜೀವಿಗಳ ಪ್ರತಿಕೃತಿ ನಿರ್ಮಾಣ ಮಾಡಿದ್ದೇವೆ. ಕಾಂತಾರ ಚಲನಚಿತ್ರದಲ್ಲೂಇಂತಹ ಕಲಾಕೃತಿಗಳನ್ನು ನಿರ್ಮಿಸಿದ ಹೆಮ್ಮೆ ನಮ್ಮದು’ ಎಂದು ಕಲಾವಿದ ಸುನೀಲ್ ಸಂತಸ ಹಂಚಿಕೊಂಡರು.
‘ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಕೃತಕ ಅರಣ್ಯ ನಿರ್ಮಿಸಲಾಗಿದೆ. ಚಿಕ್ಕದಾದ ಕೊಳ ಹಾಗೂ ಬಿದಿರಿನ ಸೇತುವೆಯನ್ನೂ ನಿರ್ಮಿಸಲಾಗಿದೆ. ಬಡುಕಟ್ಟು ಸಮುದಾಯದ ವ್ಯಕ್ತಿಗಳ ಪ್ರತಿಕೃತಿ ಹಾಗೂ ಗುಡಿಸಲು ನಿರ್ಮಿಸುವ ಕಾರ್ಯವೂ ನಡೆದಿದೆ. ರಾಯಚೂರಿನ ಜನತೆಗೆ ಹೆಚ್ಚಿನ ಖುಷಿಕೊಡಲಿದೆ’ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ವನಿತಾ ಆರ್. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.