ADVERTISEMENT

ರಾಯಚೂರು ಉತ್ಸವ: ಫೆ.2, 3ರಂದು ಮಕ್ಕಳ ಹಬ್ಬ

ಐದು ಸಾವಿರ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ: ಕೃಷ್ಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:25 IST
Last Updated 31 ಜನವರಿ 2026, 6:25 IST
ಕೋಳಿ ನೃತ್ಯ
ಕೋಳಿ ನೃತ್ಯ    

ರಾಯಚೂರು: ‘ಎಡೆದೊರೆ ನಾಡು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಫೆ.2 ಹಾಗೂ 3ರಂದು ಮಕ್ಕಳ ಹಬ್ಬ ನಡೆಯಲಿದ್ದು, ಐದು ಸಾವಿರ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಉತ್ಸವ ಸಮಿತಿ ಸದಸ್ಯ ಕೃಷ್ಣ ಶಾವಂತಗೇರಾ ತಿಳಿಸಿದರು.

ಎರಡು ದಿನಗಳ ಮಕ್ಕಳ ಹಬ್ಬಕ್ಕೆ ಪ್ರತಿ ತಾಲ್ಲೂಕಿನಿಂದ ಐದು ವಾಹನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರೊಬೊಟಿಕ್ ಶೋ, ಕುದ್ರೋಳಿ ಗಣೇಶ ಅವರಿಂದ ಜಾದೂ ಪ್ರದರ್ಶನ, ನಾಲ್ಕು ಹಂತದಲ್ಲಿ ಮುಖವಾಡ, ಗೂಡುದೀಪ, ಮಣ್ಣಿನ ಮೂರ್ತಿ ತಯಾರಿಸುವ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.

ಫೆ.2ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಕ್ಕಳ ಹಬ್ಬಕ್ಕೆ ಚಾಲನೆ ನೀಡುವರು. ಮಕ್ಕಳು ಸಾಂಸ್ಕೃತಿಕ ಪ್ರದರ್ಶನ ನೀಡುವರು. ಅಶೋಕ ಪಳಲಿಯವರಿಂದ ಕೋಳಿ ನೃತ್ಯ, ವರ್ಚುವಲ್‌ ಶೋಗಳು ನಡೆಯಲಿವೆ. ಸಂಜೆ 4 ಗಂಟೆಗೆ ಮಾವಿನ ಕೆರೆ ಬಳಿ ಕೆರೆ ಹಬ್ಬ ನಡೆಯಲಿದೆ. ಸಿಡಿಮದ್ದು ಪ್ರದರ್ಶನ, ಗಾಳಿಪಟ ಉತ್ಸವ ನಡೆಯಲಿದೆ ಎಂದು ಹೇಳಿದರು.

ಡಯಟ್ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಭಂಡಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ ಕೇಶವರೆಡ್ಡಿ, ರಾಜಾ ಶ್ರೀನಿವಾಸ, ಎಸ್.ಕೆ.ನಾಗಿರೆಡ್ಡಿ, ಶೇಖರ ರಾಂಪೂರ, ರವಿ ಮನ್ಸಲಾಪುರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.