ADVERTISEMENT

ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ: 500 ಸ್ಥಳೀಯ ಕಲಾವಿದರಿಗೆ ಅವಕಾಶ-DC

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:16 IST
Last Updated 22 ಜನವರಿ 2026, 5:16 IST
ರಾಯಚೂರು ಉತ್ಸವದ ಅಂಗವಾಗಿ ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿ ಗೋಡೆಗಳ ಮೇಲೆ ಗದಗಿನ ಕಲಾವಿದರು ಅಲಿಯಾಬಾದ್ ಬೆಟ್ಟದ ಚಿತ್ರ ಬಿಡಿಸಿರುವುದು
ರಾಯಚೂರು ಉತ್ಸವದ ಅಂಗವಾಗಿ ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿ ಗೋಡೆಗಳ ಮೇಲೆ ಗದಗಿನ ಕಲಾವಿದರು ಅಲಿಯಾಬಾದ್ ಬೆಟ್ಟದ ಚಿತ್ರ ಬಿಡಿಸಿರುವುದು   

ರಾಯಚೂರು: ‘24 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿರುವ ರಾಯಚೂರು ಉತ್ಸವದಲ್ಲಿ ಐದು ವೇದಿಕೆಗಳನ್ನು ಸಿದ್ಧಪಡಿಸಿ ಜಿಲ್ಲೆಯ 500 ಕಲಾವಿದರಿಗೆ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಮಟ್ಟದ ಕಲಾವಿದರಿಗೂ ಅವಕಾಶ ಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದರು.

ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಕರ್ತರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲಾಡಳಿತಕ್ಕೆ ಲಿಖಿತವಾಗಿ ಮನವಿ ಸಲ್ಲಿಸಿದ ಎಲ್ಲ ಕಲಾವಿದರಿಗೂ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಕ್ಕಳ ಉತ್ಸವ, ಮಹಿಳಾ ಸಮಾವೇಶ ಹಾಗೂ ರೈತ ಸಮಾವೇಶಗಳಲ್ಲೇ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ 600 ಸಂಘಗಳಿವೆ. ಎಲ್ಲರಿಗೂ ಸಮಿತಿಗಳಲ್ಲಿ ಅವಕಾಶ ಕೊಡಲು ಸಾಧ್ಯವಿಲ್ಲ. ಸಂಘಟನೆಗಳ ಪೂರ್ವಪರ ಅವಲೋಕಿಸಿ ಕೆಲವು ಸಂಘಟನೆಗಳಿಗೆ ಸೇವೆ ಮಾಡಲು ಅನುವು ಮಾಡಿಕೊಡಲಾಗಿದೆ. ದೊಡ್ಡ ಕಾರ್ಯಕ್ರಮ ಎಂದ ಮೇಲೆ ಸಣ್ಣಪುಟ್ಟ ಲೋಪಗಳು ಸಹಜ. ಹೀಗಾಗಿ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡು ಉತ್ಸವದ ಯಶಸ್ವಿಗೆ ಒತ್ತು ಕೊಡಲಾಗಿದೆ’ ಎಂದು ಹೇಳಿದರು.

ರಾಯಚೂರು ಉತ್ಸವದ ಅಂಗವಾಗಿ ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿ ಗೋಡೆಗಳ ಮೇಲೆ ಗದಗಿನ ಕಲಾವಿದರು ಮುದಗಲ್‌ ಕೋಟೆಯ ಅವಶೇಷದ ಚಿತ್ರ ಬಿಡಿಸಿರುವುದು

‘ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಲಾಗುವುದು. ಗಾಳಿಪಟ ಉತ್ಸವ, ಜಾದು ಪರ್ದರ್ಶನ, ರೋಬೊಟಿಕ್‌ ಅನಿಮಲ್‌ ಪ್ರದರ್ಶನ, ಕೃಷಿ ಮೇಳ, ಫಲಪುಷ್ಪ ಪ್ರದರ್ಶನ, ಕೈಗಾರಿಕೆ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಸಹ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

‘ಉತ್ಸವದಲ್ಲಿ ಆಹಾರ ಮೇಳ ನಡೆಯಲಿದೆ. ಒಟ್ಟು 100 ಮಳಿಗೆ ತೆರೆದು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉಪಾಹಾರ ಹಾಗೂ ಸ್ಥಳೀಯ ಖಾದ್ಯ ದೊರಕುವಂತೆ ಮಾಡಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ರಾತ್ರಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ’ ಎಂದರು.

ರಾಯಚೂರು ಉತ್ಸವ
ಗಾಯನ ಕಾರ್ಯಕ್ರಮ
‘ಖ್ಯಾತ ಗಾಯಕ ವಿಜಯ್‌ ಪ್ರಕಾಶ್ ಸಂಜಿತ್ ಹೆಗಡೆ ರಾಜೇಶ ಕೃಷ್ಣನ್‌ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಕಲಾವಿದ ಕ್ಲಾರಿಯೋನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಪ್ರದರ್ಶನ ನೀಡಲಿದ್ದಾರೆ’ ಎಂದು ತಿಳಿಸಿದರು. ‘ಹೆಲಿಕಾಪ್ಟರ್‌ನಲ್ಲಿ ಸಂಚರಿಸಲು ಜನ ಸಾಮಾನ್ಯರಿಗೆ ಅವಕಾಶ ಮಾಡಿಕೊಡ ಲಾಗಿದೆ. ₹4500 ಪಾವತಿಸಿ ಒಂದು ತಾಸು ಸಂಚರಿಸಬಹುದಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಪತ್ರಕರ್ತರ ಒತ್ತಾಸೆಯ ಫಲ’

‘ಜಿಲ್ಲೆಯಲ್ಲಿ ರಾಯಚೂರು ಉತ್ಸವ ಆಗಬೇಕು ಎಂದು ರಾಯಚೂರು ಜಿಲ್ಲೆಯ ಎಲ್ಲ ಮಾಧ್ಯಮ ಪ್ರತಿನಿಧಿಗಳು ಮೇಲಿಂದ‌ ಮೇಲೆ ಒತ್ತಾಸೆ ಮಾಡಿದ್ದರಿಂದ ಪ್ರಸಕ್ತ ವರ್ಷ ರಾಯಚೂರು ಉತ್ಸವ ನಡೆಸಲು ಸಾಧ್ಯವಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದರು. ‘ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಇಚ್ಛಾಸಕ್ತಿ ಮತ್ತು ಪತ್ರಕರ್ತರ ಪ್ರಯತ್ನದಿಂದ 2026ರ ಪ್ರಸಕ್ತ ವರ್ಷದಲ್ಲಿ ನಿಗದಿಯಾದ ಉತ್ಸವಕ್ಕೆ ಬೇರೆ ಬೇರೆ ಕಡೆಗಳಿಂದಲೂ ಹಣಕಾಸಿನ ಸಹಾಯ ಸಹಕಾರ ಸಿಗುತ್ತಿದೆ. ಈ ಮೂಲಕ ಉತ್ಸವ ಆಗಬೇಕು ಎನ್ನುವ ಸದಾಶಯವು ಎಲ್ಲ ಕಡೆಗಳಿಂದಲೂ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.

‘ಕಡಿಮೆ ಬಜೆಟ್‌ನಲ್ಲಿಯೂ ಅತ್ಯಂತ ವಿಭಿನ್ನ ರೀತಿಯಲ್ಲಿ ಉತ್ಸವದಲ್ಲಿ ನಾನಾ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುತ್ತಿದೆ’ ಎಂದು ಹೇಳಿದರು. ‘ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ಜಿಲ್ಲೆಯ ಎಲ್ಲ ಗಣ್ಯ ಮಹನೀಯರಿಂದ ನಾಗರಿಕರು ಸಂಘ–ಸಂಸ್ಥೆಗಳ ಪದಾಧಿಕಾರಿಗಳಿಂದ‌ ಕೇಳಿ ಬಂದ ಎಲ್ಲ ಸಲಹೆಗಳನ್ನು ಪರಿಗಣಿಸಿ ಉತ್ಸವದ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ಪತ್ರಕರ್ತರ ಕೋರಿಕೆಯಂತೆ ಪತ್ರಕರ್ತರಿಗಾಗಿಯೇ ಪ್ರತ್ಯೇಕ ಮಾಧ್ಯಮಗೋಷ್ಠಿ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ಹೊರಗಡೆಯಿಂದ ಬರುವ ಪತ್ರಕರ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಪತ್ರಕರ್ತರು ಬೇರೆ ಬೇರೆ ಕಡೆ ಇರುವ ವೇದಿಕೆಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡುತ್ತಿದ್ದೇವೆ. ಪತ್ರಕರ್ತರಿಗೆ ಪ್ರವೇಶ ಪಾಸ್‌ಗಳನ್ನು ನೀಡಲಾಗುವುದು’ ಎಂದು ಹೇಳಿದರು. ಪತ್ರಕರ್ತರಾದ ಚಂದ್ರಕಾಂತ ಮಸಾನಿ ಆರ್.ಗುರುನಾಥ ಚನ್ನಬಸವ ಬಾಗಲವಾಡ ಅರವಿಂದ ಕುಲಕರ್ಣಿ ಕೆ.ಸತ್ಯನಾರಾಯಣ ಖಾನ್‌ಸಾಬ್ ಮೋಮಿನ್ ರಾಚಯ್ಯ ಸ್ವಾಮಿ ಸಿದ್ದಯ್ಯ ಸ್ವಾಮಿ ವಾಗೀಶ್ ಪಾಟೀಲ ಸಲಹೆಗಳನ್ನು ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಪ್ರಚಾರ ಸಮಿತಿ ಅಧ್ಯಕ್ಷೆ ಸಂತೋಷ ರಾಣಿ ಸಮಿತಿಯ ಸದಸ್ಯ ಕಾರ್ಯದರ್ಶಿ ವಿವಿಧ ಪತ್ರಿಕೆಗಳ ಮತ್ತು ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಹಾಜರಿದ್ದರು. 

ಪೋಸ್ಟರ್ ಬಿಡುಗಡೆ
ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಕಾರ್ಯಕ್ರಮಗಳ ವೇಳಾಪಟ್ಟಿ, ಬ್ಯಾನರ್, ಪೋಸ್ಟರ್, ಬಲೂನ್, ಕರಪತ್ರ, ಪಾಸ್ ಹಾಗೂ ಸಾಮಾಜಿಕ ಜಾಲತಾಣ ಬಿಡುಗಡೆ ಕಾರ್ಯಕ್ರಮ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಅವರು ಜಿಲ್ಲಾ ಉತ್ಸವದ ಪೋಸ್ಟರ್ ಹಾಗೂ ವೇಳಾಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.