ADVERTISEMENT

ರಾಯಚೂರು: ಬೃಹತ್ ವೇದಿಕೆ, ರೂಪರೇಷೆ ಪರಿಶೀಲನೆ

ರಾಯಚೂರು ಉತ್ಸವ ಸಿದ್ಧತೆ: ಜನಪ್ರತಿನಿಧಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:34 IST
Last Updated 5 ಜನವರಿ 2026, 5:34 IST
ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾಯಚೂರು ಉತ್ಸವದ ಅಂಗವಾಗಿ ಆರಂಭವಾದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು  ಬಸನಗೌಡ ದದ್ದಲ್‌ ಉಪಸ್ಥಿತರಿದ್ದರು
ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾಯಚೂರು ಉತ್ಸವದ ಅಂಗವಾಗಿ ಆರಂಭವಾದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು  ಬಸನಗೌಡ ದದ್ದಲ್‌ ಉಪಸ್ಥಿತರಿದ್ದರು   

ರಾಯಚೂರು: ಜ.29,30 ಹಾಗೂ 31ರಂದು ನಿಗದಿಯಾದ ರಾಯಚೂರು ಉತ್ಸವ-2026ರ ವೇದಿಕೆಯ ಹಾಗೂ ನಾನಾ ಕಾರ್ಯಕ್ರಮಗಳ ಸಮಗ್ರ ಸ್ವರೂಪದ ಪ್ರಾತ್ಯಕ್ಷಿಕೆಯನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಎನ್.ಎಸ್. ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಡಾ.ಎಸ್.ಶಿವರಾಜ ಪಾಟೀಲ, ಬಸನಗೌಡ ತುರವಿಹಾಳ, ಹಂಪಯ್ಯ ನಾಯಕ, ಎ ವಸಂತಕುಮಾರ ವೀಕ್ಷಿಸಿದರು.

ಉತ್ಸವದ ಲೋಗೊ, ಮುಖ್ಯ ಕಾರ್ಯಕ್ರಮದ ವೇದಿಕೆ ಹಾಗೂ ಹೆಸರಾಂತ ಕಲಾವಿದರು ಭಾಗಿಯಾಗುವ ಬೃಹತ್ ವೇದಿಕೆಗಳ ಮಾದರಿ ವೀಕ್ಷಣೆ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ.4ರಂದು ನಡೆದ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಉತ್ಸವಕ್ಕೆ ಸಂಬಂಧಿಸಿ ಸಲಹೆ‌–ಸೂಚನೆ ನೀಡಿದರು.

ADVERTISEMENT

ಎಲ್ಲ ಸಮಿತಿಗಳ ಮೇಲೆ ಮೇಲ್ವಿಚಾರಣಾ ಸಮಿತಿ ರಚಿಸಿ ನಿತ್ಯ ಎಲ್ಲ ತಯಾರಿಯ ಪರಿಶೀಲನೆ ಆಗಬೇಕು. ಕೂಡಲೇ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳ, ಸಾಹಿತಿಗಳು, ಕಲಾವಿದರು, ಕವಿಗಳು, ಅಂಗಡಿಕಾರರು, ಶಾಲಾ ಕಾಲೇಜುಗಳ ಆಡಳಿತ ಮಂಡಳಿ  ಸಭೆ ನಡೆಸಿ ಸಲಹೆ ಪಡೆಯಬೇಕು. ಆಯಾ ತಹಶೀಲ್ದಾರ್‌ ಹಾಗೂ ತಾ.ಪಂ ಇಒಗಳು ತಾಲ್ಲೂಕಿನಲ್ಲಿ ಸಭೆ ನಡೆಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ವಾಲ್ಮೀಕಿ ವಿಶ್ವವಿದ್ಯಾಲಯ ಸೇರಿದಂತೆ ಬೇರೆ ಬೇರೆ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಲಹೆ ನೀಡಿದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಅನೇಕ ವರ್ಷಗಳ ನಂತರ ಉತ್ಸವ ನಡೆಯುತ್ತಿದ್ದು ಇದು ಜನರ ಉತ್ಸವ ಆಗಬೇಕು. ಇದು ರಾಯಚೂರು ಸಿಟಿ ಉತ್ಸವ ಅಲ್ಲ; ಜಿಲ್ಲಾ ಉತ್ಸವವಾಗಿದೆ. ಹಾಗಾಗಿ ಎಲ್ಲರೂ ಪಕ್ಷಬೇಧ ಮರೆತು ಒಗ್ಗೂಡಿ ಉತ್ಸವ ಮಾಡಬೇಕು’ ಎಂದರು. 

ರಾಯಚೂರು ಉತ್ಸವದ ಪ್ರಚಾರಾರ್ಥ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು. 

‘ಜಿಲ್ಲೆಯ ಪ್ರತಿಯೊಂದು ಸಂಘ-ಸಂಸ್ಥೆಗಳು, ಎಲ್ಲ ಶಾಲಾ ಕಾಲೇಜುಗಳು ಈ ಉತ್ಸವದಲ್ಲಿ
ಸಕ್ರಿಯ ಭಾಗಿಯಾಗಿ ಉತ್ಸವ ಯಶಗೊಳಿಸಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿಯ ಪವನ್ ಕಿಶೋರ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ತಹಶೀಲ್ದಾರ ಸುರೇಶ ವರ್ಮಾ, ಡಾ.ರಝಾಕ್ ಉಸ್ತಾದ್, ಪಾಲಿಕೆಯ ಉಪ ಆಯುಕ್ತೆ ಸಂತೋಷರಾಣಿ, ಅಮರೇಶ ಬಿರಾದಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ವಿವಿಧ ಕ್ರೀಡೆ ಸ್ಪರ್ಧೆಗಳು

ರಾಜ್ಯಮಟ್ಟದ ವಾಲಿಬಾಲ್ ಕಬ್ಬಡ್ಡಿ ಪಂದ್ಯ ನಡೆಯಲಿವೆ. ಸೈಕ್ಲಿಂಗ್ ಮ್ಯಾರಾಥಾನ್ ಸೈಕ್ಲಿಂಗ್ ಓಟ ಕುಸ್ತಿ ಪಂದ್ಯ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ. ಜ.29ರಂದು ಬೆಳಿಗ್ಗೆ ಮೆರವಣಿಗೆ ಸಂಜೆ 5ರಿಂದ ಉತ್ಸವದ ಉದ್ಘಾಟನೆ ನಡೆಯಲಿದೆ. ಜಿಲ್ಲಾ ರಂಗಮಂದಿರ ಕೃಷಿ ವಿವಿ ಆವರಣದಲ್ಲಿನ ಕಾನ್ಫರೆನ್ಸ್ ಹಾಲ್ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗಿದೆ. ಜ.30ರಂದು ಬೆಳಗ್ಗೆ ಉದ್ಯೋಗ ಮೇಳ ನಡೆಯಲಿದೆ. ಫಲಪುಷ್ಪ ಮೇಳವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಮತ್ಸಮೇಳ ಡಾಗ್ ಶೋ ಶಾಲಾ ಮಕ್ಕಳಿಗಾಗಿ ಪ್ರಬಂಧ ಸಾಹಿತಿಗಳಿಂದ ಕವಿಗೋಷ್ಟಿ ಮಹಿಳಾಗೋಷ್ಠಿ ಮಾಧ್ಯಮಗೋಷ್ಠಿ ನಡೆಸಲಾಗುವುದು ಎಂದರು. ಆಹಾರ ಮೇಳ ನಡೆಸಿ100 ಸ್ಟಾಲಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಜನವರಿ 31ರಂದು ಗ್ಯಾರಂಟಿ ಮೇಳ ಬೆಳಿಗ್ಗೆ 10ರಿಂದ 2 ಗಂಟೆವರೆಗೆ ಕೃಷಿ ಮೇಳ ನಡೆಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್.ಕೆ ಸಭೆಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.