ರಾಯಚೂರು: ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಡಾ.ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಪಕ್ಷದ ಶಲ್ಯ ಧರಿಸಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರು ‘ವೋಟ್ ಚೋರ್, ಗದ್ದಿ ಛೋಡ್’ ಎಂದು ಘೋಷಣೆಗಳನ್ನು ಕೂಗಿದರು.
ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ಮಾತನಾಡಿ, ‘ಬಿಜೆಪಿಯು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಚುನಾವಣೆ ಆಯೋಗವನ್ನೂ ದುರ್ಬಳಕೆ ಮಾಡಿಕೊಳ್ಳುತ್ತದೆ. ವಾಮ ಮಾರ್ಗದ ಮೂಲಕ ಅಧಿಕಾರಿದ ಚುಕ್ಕಾಣಿ ಹಿಡಿದಿದೆ’ ಎಂದು ಆರೋಪ ಮಾಡಿದರು.
‘ಮಹಾರಾಷ್ಟ್ರದಲ್ಲಿ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಗಡಿಯಾಚಿನ ಜನರ ಹೆಸರು ಸೇರಿಸಿದ್ದಾರೆ. ಚುನಾವಣೆಯ ನಂತರ ಡಿಲೀಟ್ ಮಾಡಲಾಗಿದೆ. ಕರ್ನಾಟಕದಲ್ಲೂ ಇಂತಹ ಕೃತ್ಯಗಳು ನಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಕ್ರಮ ಮತಗಳು ಚಲಾವಣೆ ಆಗದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 140ರ ಬದಲಿಗೆ 200 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿತ್ತು‘ ಎಂದು ಹೇಳಿದರು.
‘ಕೆಲವು ರಾಜ್ಯಗಳಲ್ಲಿ ಬೋಗಸ್ ಮತದಾರರು ಇರುವುದನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್ ಮನೆ ಮನೆಗೆ ಹೋಗಿ ಮತಗಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ’ ಎಂದು ತಿಳಿಸಿದರು.
‘ಚುನಾವಣೆ ಆಯೋಗ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವುದನ್ನು ನಿಲ್ಲಸಬೇಕು. ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸುವಂತೆ ಒತ್ತಾಯಿಸಲಾಗುತ್ತಿದೆ‘ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿ, ‘ಮತದಾರರ ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತದಾರರು ಮತ ಪಟ್ಟಿಯಲ್ಲಿ ತಮ್ಮ ಹೆಸರು ಖಾತರಿಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಮಾತನಾಡಿ, ‘ಮತಗಳ್ಳತನ ವಿರೋಧಿಸಿ ಪಕ್ಷದಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸಿಸಲಾಗಿದೆ. ಒಟ್ಟು 2 ಕೋಟಿಗೂ ಅಧಿಕ ಸಹಿ ಸಂಗ್ರಹಿಸಿ, ಕೇಂದ್ರ ಸರ್ಕಾರದ ಹಾಗೂ ಚುನಾವಣೆ ಆಯೋಗದ ಗಮನ ಸೆಳೆಯಲಾಗುವುದು‘ ಎಂದು ತಿಳಿಸಿದರು.
‘ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಪಕ್ಕೆ ಒಂದೂ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಹುಡುಕಿ ಹುಡುಕಿ ತೆಗೆದುಹಾಕುವುದು ಮತ್ತು ತಮಗೆ ಬೇಕಾದ ಮತದಾರರನ್ನು ಅಕ್ರಮವಾಗಿ ಸೇರಿಸುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮಾಡುತ್ತಿರುವುದು ದೇಶದ ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ’ ಎಂದು ಹೇಳಿದರು.
‘ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ದೊರೆಯಬೇಕು. ಮತಗಳ್ಳತನ ನಡೆಯಬಾರದೆಂದು ನಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಅವರು ಹೋರಾಟ ಮಾಡಿರುವುದರಿಂದಲೇ ಇಂದು ಚುನಾವಣಾ ಆಯೋಗ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಲು ಓಟಿಪಿ ಮಾದರಿ ಜಾರಿಗೊಳಿಸಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕಗೆಲುವು. ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿ, ಚುನಾವಣಾ ಆಯೋಗಕ್ಕೆ ಹಲವು ನಿರ್ದೇಶನ ನೀಡಿದೆ’ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ವಿಧಾನ್ ಪರಿಷತ್ ಮಾಜಿ ಸದಸ್ಯ
ಶರಣಪ್ಪ ಮಟ್ಟೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಾಮಯ್ಯ ಮುರಾರಿ, ಕೆಪಿಸಿಸಿ ರಾಜ್ಯ ವಕ್ತಾರ ಡಾ.ರಜಾಕ್ ಉಸ್ತಾದ್, ಕೆ.ಅಸ್ಲಂ ಪಾಶಾ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಡಿ.ಕೆ.ಮುರಳಿ ಯಾದವ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.