ADVERTISEMENT

ರಾಯಚೂರು: ಆಹಾರ ಮೇಳಕ್ಕೆ ಮಕ್ಕಳ, ಯುವಕರ ದಂಡು

ಜಿಲೇಬಿ ಸವಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:08 IST
Last Updated 7 ಫೆಬ್ರುವರಿ 2026, 4:08 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಆರಂಭವಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಬೆಲ್ಲದ ಜಿಲೇಬಿ ಸವಿದರು
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಆರಂಭವಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಬೆಲ್ಲದ ಜಿಲೇಬಿ ಸವಿದರು   

ರಾಯಚೂರು: ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ತೆರೆಯಲಾದ ಆಹಾರ ಮೇಳದ ಮಳಿಗೆಗಳಲ್ಲಿ ಉತ್ಸವದ ಮೊದಲ ದಿನವೇ ಮಕ್ಕಳು, ಯುವಕರು, ಯುವತಿಯರು ತಿಂಡಿ ತಿನಿಸುಗಳಿಗೆ ಮುಗಿಬಿದ್ದು ಸೇವಿಸಿ ಸಂಭ್ರಮಿಸಿದರು.

ಆಹಾರ ಮೇಳದಲ್ಲಿ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿದಂತೆ 12 ಜಿಲ್ಲೆಗಳಿಂದ ಆಗಮಿಸಿದ್ದ ಹಲವು ಬಗೆಯ ತಿಂಡಿ, ಖಾದ್ಯಗಳ ತಯಾರಕರು, ಮಳಿಗೆಯಲ್ಲಿ ತಮ್ಮ ತಿಂಡಿ ತಿನಿಸುಗಳನ್ನು ಇಲ್ಲಿ ಪರಿಚಯಿಸಿದರು.
ಉತ್ಸವ ಆರಂಭಗೊಂಡ ಮೊದಲ ದಿನವೇ ಬೆಳಿಗ್ಗೆಯಿಂದಲೇ ಆಹಾರ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಹರಿದುಬಂದ ಜನ ವಿವಿಧ ಬಗೆಯ ತಿನಿಸುಗಳನ್ನು ಸವಿದರು. 

ಹಲವು ಶಾಲೆಗಳ ಮಕ್ಕಳು ಕೂಡ ಉತ್ಸವದ ಸವಿ ಸವಿಯಲು ಶಾಲಾ ಶಿಕ್ಷಕರುಗಳೊಂದಿಗೆ ಆಹಾರ ಮೇಳಕ್ಕೂ ಭೇಟಿ ನೀಡಿ, ತಮಗಿಷ್ಟ ತಿಂಡಿ ತಿನಿಸುಗಳನ್ನು ತಿಂದು ಸಂಭ್ರಮಿಸಿದರು.

ADVERTISEMENT

ಆಹಾರ ಮೇಳದಲ್ಲಿ ಫಾಸ್ಟ್‌ ಫುಡ್‌ ತಿನಿಸುಗಳಿಂದ ಮೊದಲುಗೊಂಡು, ವಿವಿಧ ಬಗೆಯ ಹಣ್ಣುಗಳ ಜ್ಯೂಸ್‌ ಅಂಗಡಿಗಳು, ಮಂಡಾಳು ಒಗ್ಗರಣಿ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ, ಪಾಪ್‌ಕಾರ್ನ್‌, ಗೋಬಿ ಮಂಚೂರಿ, ನೂಡಲ್ಸ್‌, ಆಂಧ್ರಾ ಸ್ವೀಟ್ಸ್‌, ನಾನಾ ಬಗೆಯ ಹಪ್ಪಳ, ಸಂಡಿಗೆ ಸೇರಿದಂತೆ ನಾಡಿನ ನಾನಾ ಭಾಗದಲ್ಲಿನ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಜನರಿಗೆ ಲಭ್ಯವಾಗುವಂತೆ ಆಹಾರ ಮೇಳದಲ್ಲಿ ವ್ಯವಸ್ಥೆ ಗೊಳಿಸಲಾಗಿತ್ತು. 

ಆಹಾರ ಮೇಳದ ಮೊದಲ ದಿನವೇ ತಿಂಡಿ ತಿನಿಸುಗಳ ಮಳಿಗೆಗಳಲ್ಲಿ ಭರ್ಜಿರಿ ವ್ಯಾಪಾರವಾಗಿದ್ದು ಕಂಡುಬಂದಿತು.  ಶನಿವಾರದ ವರೆಗೂ ಆಹಾರ ಮೇಳ ನಡೆಯಲಿದೆ.

ಸಚಿವರಿಂದ ಉದ್ಘಾಟನೆ:

ಆಹಾರ ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರು ಅವರು ವಿವಿಧ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯೊಬ್ಬರು ಮಳಿಗೆಯಲ್ಲಿ ಆಗಷ್ಟೇ ತಯಾರಿಸಿದ್ದ ಜಿಲೇಬಿಯನ್ನು ಪಡೆದು ರುಚಿ ನೋಡಿದರು. ಇವರೊಂದಿಗೆ ಮಳಿಗೆಗೆ ಆಗಮಿಸಿದ್ದ ವಿವಿಧ ಗಣ್ಯರು ಕೂಡ ಜಿಲೇಬಿಯ ಸವಿಯನ್ನು ಸವಿದರು.  ಬಳಿಕ ಆಹಾರ ಮಳಿಗೆಯಲ್ಲಿಯೇ ವಿಶೇಷವಾಗಿ ತಯಾರಿಸಲಾಗಿದ್ದ ಕೇಕ್‌ ಅನ್ನು ಕೂಡ ಕತ್ತರಿಸಿ ಆಹಾರ ಮೇಳದ ಸಂಭ್ರವನ್ನು ಇಮ್ಮಡಿಗೊಳಿಸಿದರು.

ಈ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್‌, ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ,  ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ,  ಜಿಲ್ಲಾಧಿಕಾರಿ ನಿತೀಶ್‌ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದು, ಎಸ್‌ಪಿ ಅರುಣಾಂಗ್ಷು ಗಿರಿ,  ಕೃಷಿ ವಿವಿ ಕುಲಪತಿ ಎಂ. ಹನುಮಂತಪ್ಪ, ಮಹಾನಗರಪಾಲಿಕೆ ಆಯುಕ್ತ ಜುಬಿನ್‌ ಮೊಹಾಪಾತ್ರ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಶೀರ್‌ ಅಹ್ಮದ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.