ADVERTISEMENT

ಮಳೆ ಅಬ್ಬರಕ್ಕೆ ನಗರ; ಅವ್ಯವಸ್ಥೆ ಆಗರ

ಬಾಯಿ ತೆರೆದುಕೊಂಡು ಅರ್ಧಮರ್ಧ ದುರಸ್ತಿಯಾದ ರಸ್ತೆ ತಗ್ಗುಗಳು

ನಾಗರಾಜ ಚಿನಗುಂಡಿ
Published 2 ಜೂನ್ 2020, 15:25 IST
Last Updated 2 ಜೂನ್ 2020, 15:25 IST
ರಾಯಚೂರು ನಗರ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯು ಮಂಗಳವಾರ ಸುರಿದ ಮಳೆಯಿಂದ ಆಶಾಪುರ ಕ್ರಾಸ್‌ನಲ್ಲಿ ಜಲಾವೃತವಾಗಿದ್ದರಿಂದ ಸಂಚಾರಕ್ಕೆ ಅನಾನುಕೂಲವಾಯಿತು
ರಾಯಚೂರು ನಗರ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯು ಮಂಗಳವಾರ ಸುರಿದ ಮಳೆಯಿಂದ ಆಶಾಪುರ ಕ್ರಾಸ್‌ನಲ್ಲಿ ಜಲಾವೃತವಾಗಿದ್ದರಿಂದ ಸಂಚಾರಕ್ಕೆ ಅನಾನುಕೂಲವಾಯಿತು   

ರಾಯಚೂರು: ಮಳೆಗಾಲ ಈಗಷ್ಟೇ ಆರಂಭವಾಗುತ್ತಿದ್ದು, ನಗರದಲ್ಲೆಡೆ ರಸ್ತೆ ಅವ್ಯವಸ್ಥೆ ಶುರುವಾಗಿದೆ. ಮಂಗಳವಾರ ಸುರಿದ ಮಳೆಯಿಂದ ನಗರ ಮಧ್ಯದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು.

ಹಗರಿ–ಜಡಚರ್ಲಾ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167)ಯಲ್ಲಿರುವ ಆಶಾಪುರ ಕ್ರಾಸ್‌ ತಿರುವು ಸಂಪೂರ್ಣ ಜಲಾವೃತವಾಗಿದ್ದರಿಂದ ವಾಹನಗಳ ಸಂಚಾರವು ಸಂಕಷ್ಟವಾಯಿತು. ದೊಡ್ಡ ವಾಹನಗಳು ಸಂಚರಿಸುವಾಗ ಹೆದ್ದಾರಿಗೆ ಹೊಂದಿಕೊಂಡಿರುವ ಜನವಸತಿಗಳಿಗೆ ನೀರು ನುಗ್ಗುತ್ತಿದ್ದ ದೃಶ್ಯ ಕಂಡುಬಂತು. ಬೈಕ್‌ ಹಾಗೂ ಆಟೊಗಳು ಕೆಲಕಾಲ ಕಾದು ನಿಂತುಕೊಳ್ಳಬೇಕಾಯಿತು.

ಆಶಾಪುರ ಮಾರ್ಗದಲ್ಲಿ ಎಫ್‌ಸಿಐ ಗೋದಾಮು ಗೇಟ್‌ನಿಂದ ರಾಜರಾಜೇಶ್ವರಿ ದೇವಸ್ಥಾನದವರೆಗಿನ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಗುಡ್ಡಗಳಿಂದ ಹರಿದು ಬರುವ ನೀರಿನ ರಭಸಕ್ಕೆ ರಸ್ತೆ ಕೊಚ್ಚಿಹೋಗಿದ್ದು, ಶೀಘ್ರದಲ್ಲೆ ಸಂಚಾರ ಸ್ಥಗಿತವಾಗುವ ಸ್ಥಿತಿ ಇದೆ. ಈ ಮಾರ್ಗದಲ್ಲಿ ಮಳೆನೀರು ಹರಿಯುವುದಕ್ಕೆ ಚರಂಡಿ ನಿರ್ಮಿಸಿಲ್ಲ. ಮುಂಗಾರು ಮಳೆ ಶುರುವಾದರೆ ಸಮಸ್ಯೆಗಳು ಇನ್ನೂ ಉಲ್ಭಣಿಸಲಿವೆ.

ADVERTISEMENT

ಆರ್‌ಟಿಒ ಕ್ರಾಸ್‌, ನಿಜಲಿಂಗಪ್ಪ ಕಾಲೋನಿ, ರಾಂಪುರ ರಸ್ತೆ, ಎಲ್‌ಬಿಎಸ್‌ ನಗರ, ಕೈಲಾಸ ನಗರ, ಎಪಿಎಂಸಿ ಮುಖ್ಯದ್ವಾರ, ಗದ್ವಾಲ್‌ ರಸ್ತೆ, ಮುನ್ನೂರವಾಡಿ, ವಾಸವಿನಗರ, ಗಂಗಾನಿವಾಸ, ಮಡ್ಡಿಪೇಟೆ, ಜ್ಯೋತಿ ಕಾಲೋನಿ, ಐಬಿ ಕಾಲೋನಿಯಲ್ಲಿನ ಮಾರ್ಗಗಳು ಜಲಾವೃತವಾಗಿದ್ದು, ಸಂಚಾರ ವ್ಯತ್ಯಯವಾಗಿದೆ. ಕೆಲವು ಕಡೆ ಮಳೆನೀರು ಹರಿದು ಹೋಗುವ ಮಾರ್ಗಗಳಿಲ್ಲ. ಮಳೆನೀರಿನಿಂದ ಮುರುಂ ಕಿತ್ತುಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.