ADVERTISEMENT

ರಾಯಚೂರು: ಅನುದಾನ ಬಳಕೆಗೆ ಅಡ್ಡಿಯಾದ ಮಳೆ

ಟಿಪ್ಪುಸುಲ್ತಾನ್‌ ರಸ್ತೆ, ಮಚ್ಚಿಬಜಾರ್‌ ರಸ್ತೆ ಅಗಲೀಕರಣಕ್ಕೆ ಮುಹೂರ್ತ

ನಾಗರಾಜ ಚಿನಗುಂಡಿ
Published 12 ಅಕ್ಟೋಬರ್ 2020, 19:30 IST
Last Updated 12 ಅಕ್ಟೋಬರ್ 2020, 19:30 IST
ರಾಯಚೂರು ನಗರದಲ್ಲಿ ನನೆಗುದಿಗೆ ಬಿದ್ದಿರುವ ಮಚ್ಚಿಬಜಾರ್ ರಸ್ತೆ ಅಗಲೀಕರಣ ಸ್ಥಳವನ್ನು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಈಚೆಗೆ ‌ಪರಿಶೀಲಿಸಿ, ಕಾಮಗಾರಿ ಆರಂಭಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ
ರಾಯಚೂರು ನಗರದಲ್ಲಿ ನನೆಗುದಿಗೆ ಬಿದ್ದಿರುವ ಮಚ್ಚಿಬಜಾರ್ ರಸ್ತೆ ಅಗಲೀಕರಣ ಸ್ಥಳವನ್ನು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಈಚೆಗೆ ‌ಪರಿಶೀಲಿಸಿ, ಕಾಮಗಾರಿ ಆರಂಭಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ   

ರಾಯಚೂರು: ನಗರದಲ್ಲಿ ಹಾಳಾಗಿರುವ ರಸ್ತೆಗಳು, ಚರಂಡಿಗಳು ಹಾಗೂ ವಿವಿಧ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಬಂದಿರುವ ಅನುದಾನ ವೆಚ್ಚ ಮಾಡಲುಅಧಿಕಾರಿಗಳು, ಗುತ್ತಿಗೆದಾರರು ಹಾಗೂ ರಾಜಕಾರಣಿಗಳು ಸಜ್ಜಾಗಿದ್ದರೂ ಮಳೆ ಅಡ್ಡಗಾಲು ಹಾಕುತ್ತಿದೆ!

ನಗರದ ಹೃದಯಭಾಗದಲ್ಲಿರುವ ಟಿಪ್ಪುಸುಲ್ತಾನ್‌ ರಸ್ತೆ ಹಾಗೂ ಮಚ್ಚಿಬಜಾರ್‌ ರಸ್ತೆಗಳ ಅಗಲೀಕರಣ ಮಾಡುವ ಕಾಮಗಾರಿ ಆರಂಭಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಖುದ್ದಾಗಿ ಈ ರಸ್ತೆಗಳಲ್ಲಿನ ತೊಂದರೆಗಳನ್ನು ಪರಿಶೀಲಿಸಿ ಕೆಲಸ ಆರಂಭಿಸಲು ನಿರ್ದೇಶನ ನೀಡಿದ್ದಾರೆ.

ಕೆಲವು ಕಟ್ಟಡಗಳ ತೆರವಿನ ಬಗ್ಗೆ ಕೋರ್ಟ್‌ ತಡೆಯಾಜ್ಞೆ ಇದೆ ಎಂಬುದನ್ನು ನಗರಸಭೆ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ, ಸಾರ್ವಜನಿಕ ರಸ್ತೆಗಳ ಅಗಲೀಕರಣ ಮಾಡುವುದಕ್ಕೆ ಧಾರ್ಮಿಕ ಕೇಂದ್ರಗಳು ಸೇರಿದಂತೆ ಯಾವುದೇ ಕಟ್ಟಡಗಳನ್ನು ತೆರವು ಮಾಡುವುದಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿರುವುದನ್ನು ಅಧಿಕಾರಿಗಳು ಪಾಲನೆ ಮಾಡಬೇಕು. ಈ ಬಗ್ಗೆ ಕಟ್ಟಡಗಳ ಮಾಲೀಕರಿಗೆ ಮನವರಿಕೆ ಮಾಡಿ, ಕೂಡಲೇ ಕೆಲಸ ಆರಂಭಿಸುವಂತೆ ಜಿಲ್ಲಾಡಳಿತದಿಂದ ಸೂಚಿಸಲಾಗಿದೆ. ಅಗತ್ಯಬಿದ್ದರೆ ಪೊಲೀಸರ ನೆರವು ಪಡೆಯಬೇಕು; ಕಾಮಗಾರಿ ವಿಳಂಬ ಮಾಡುವಂತಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಟಿಪ್ಪು ಸುಲ್ತಾನ್‌ ರಸ್ತೆ ಅಗಲೀಕರಣ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಬಹಳಷ್ಟು ಕಟ್ಟಡಗಳ ಮಾಲೀಕರು ತೆರವು ಮಾಡಿಕೊಳ್ಳುವುದಾಗಿ ಸ್ವಯಂಪ್ರೇರಣೆಯಿಂದ ಹೇಳಿದ್ದಾರೆ. ಮಳೆಗಾಲ ಮುಗಿಯುತ್ತಿದ್ದಂತೆ ಕೆಲಸ ಆರಂಭಿಸುವುದಕ್ಕೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ವಿದ್ಯುತ್‌ ಕಂಬಗಳ ಸ್ಥಳಾಂತರ, ಚರಂಡಿ ನಿರ್ಮಾಣ ಕೆಲಸಗಳು ಮೊದಲು ನಡೆಯುತ್ತವೆ. ಆನಂತರ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪೌರಾಯುಕ್ತ ಡಾ.ಟಿ.ದೇವಾನಂದ ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ, ವಿಶೇಷ ಹಣಕಾಸು ಆಯೋಗ (ಎಸ್‌ಎಫ್‌ಸಿ)ದ ಅನುದಾನ, ಎಸ್‌ಸಿಪಿ, ಎಸ್‌ಟಿಪಿ ಯೋಜನೆ ಅನುದಾನ ಸೇರಿ ₹100 ಕೋಟಿಗಿಂತಲೂ ಅಧಿಕ ಮೊತ್ತವನ್ನು ನಗರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮುಂಬರುವ ದಿನಗಳಲ್ಲಿ ವೆಚ್ಚ ಮಾಡಲು ಯೋಜಿಸಲಾಗಿದೆ.

ಶಾಸಕ ಡಾ.ಶಿವರಾಜ ಪಾಟೀಲ ಅವರು ಹೇಳಿರುವಂತೆ, ‘ಪ್ರತಿ ವಾರ್ಡ್‌ಗೂ ಅನುದಾನ ಹಂಚಿಕೆ ಮಾಡಲಾಗಿದೆ. ಹಾಳಾಗಿರುವ ರಸ್ತೆ ಕಾಮಗಾರಿಗಳನ್ನು ಆದ್ಯತೆಯಿಂದ ಮಾಡಲಾಗುತ್ತದೆ. ಮಳೆಗಾಲ ಮುಗಿಯುತ್ತಿದ್ದಂತೆ ಕೆಲಸಗಳು ಪ್ರಾರಂಭವಾಗಲಿವೆ’

ಎಡಬಿಡದೆ ಬೀಳುತ್ತಿರುವ ಮಳೆಯಿಂದಾಗಿ ನಗರದ ಮೂಲಸೌಕರ್ಯಗಳ ಹಾನಿಪ್ರಮಾಣ ಹೆಚ್ಚಾಗುತ್ತಿದೆ. ಕಚ್ಚಾರಸ್ತೆಗಳು ಹಾಳಾಗುತ್ತಿರುವ ಜೊತೆಗೆ ಪಕ್ಕಾರಸ್ತೆಗಳಲ್ಲೂ ಗುಂಡಿಗಳು ನಿರ್ಮಾಣವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.