ADVERTISEMENT

ಹಿಂದೂ ಸಂಘಟನೆ ತೊರೆದು ಕಾಂಗ್ರೆಸ್‌ಗೆ: ರಾಜಾಚಂದ್ರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 13:57 IST
Last Updated 17 ಏಪ್ರಿಲ್ 2019, 13:57 IST

ರಾಯಚೂರು: ಹಿಂದೂ ಪರ ಸಂಘಟನೆಗಳಿಗೆ ರಾಜೀನಾಮೆ ಸಲ್ಲಿಸಿ ರವಿ ಬೋಸರಾಜು ಅವರ ಮೇಲೆ ವಿಶ್ವಾಸವಿಟ್ಟು ಏಪ್ರಿಲ್‌ 19 ರಂದು ಕಾಂಗ್ರೆಸ್‌ ಸೇರ್ಪಡೆಯಾಗಲು ನಿರ್ಧಾರ ಮಾಡಲಾಗಿದೆ ಎಂದು ಶಿವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜಾಚಂದ್ರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಜಾಗರಣ ವೇದಿಕೆ, ಭಜರಂಗದಳ, ಶಿವಸೇನೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳಲ್ಲಿ 10 ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಹಿಂದುಗಳನ್ನು ರಕ್ಷಿಸುವುದಾಗಿ ಮಾತನಾಡುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಸಂಕಷ್ಟ ಸಮಯದಲ್ಲಿ ನೆರವಿಗೆ ಬರಲಿಲ್ಲ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಯಿತು. ರೌಡಿಸೀಟರ್‌ ಎಂದು ಕೇಸ್‌ ದಾಖಲಾದರೂ ಬಿಜೆಪಿಯವರು ನೆರವಿಗೆ ಬರಲಿಲ್ಲ. ಈಗ ರವಿ ಬೋಸರಾಜು ನೆರವಿಗೆ ಬಂದಿದ್ದಾರೆ ಎಂದರು.

ಕೇಸ್‌ನಿಂದ ಮುಕ್ತರಾಗಲು ಸಹಕರಿಸಿದ್ದಾರೆ. ನಾರದಗಡ್ಡೆ ಅಭಿವೃದ್ಧಿಗಾಗಿ ಕಾಂಗ್ರೆಸ್‌ನವರು ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಹಿಂದೂಪರ ಸಂಘಟನೆಗಳಲ್ಲಿ ಮುಸ್ಲಿಮರ ವಿರುದ್ಧ ಹೋರಾಟ ಮಾಡಿಲ್ಲ. ಆದರೆ, ಹಿಂದೂ ದೇಗುಲಗಳಿಗೆ ಧಕ್ಕೆಯಾದಾಗ ಮಾತ್ರ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.

ADVERTISEMENT

ಬಿಜೆಪಿ ಯುವಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ನಿಜವಾಗಿಯೂ ಹಿಂದುಪರ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್‌ ಹಿಂದೂ ವಿರೋಧಿಯಲ್ಲ ಎಂದರು.

ಬಸನಗೌಡ ಪಾಟೀಲ, ವಿನೋದಕುಮಾರ್‌, ಸಂತೋಷರೆಡ್ಡಿ, ರಾಮು, ವಿಜಯಪ್ರಸಾದ, ಅಕ್ಷಯ, ಅಜೇಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.