
ರಾಯಚೂರು: ಬಿಸಿಲ ನಾಡಿನ ಅಪರೂಪದ ಬಹುಮುಖ ಪ್ರತಿಭೆ ವಾಸ್ತುಶಿಲ್ಪಿ ಜಫರ್ ಮೊಹಿದ್ದೀನ್‌ಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
61 ವರ್ಷದ ಜಫರ್ ಮೊಹಿದ್ದೀನ್ ಅವರು ಮೂಲತಃ ರಾಯಚೂರು ಮಂಗಳವಾರ ಪೇಟೆಯವರು. 1961ರಂದು ಆಗಸ್ಟ್ 15ರಂದು ಜನಿಸಿರುವ ಇವರು ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದಿದ್ದಾರೆ. ನಂತರ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಉಪ ವಾಸ್ತುಶಿಲ್ಪಿಯಾಗಿ ಸೇವೆ 1997ರಲ್ಲಿ ಸೇವೆಗೆ ರಾಜೀನಾಮೆ ನೀಡಿ ಜಫರ್ ಅಸೋಸಿಯೇಟ್ಸ್ ಸಂಸ್ಥೆ ರಚಿಸಿಕೊಂಡು ಬೆಂಗಳೂರು ಮತ್ತು ರಾಯಚೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾನವ ಹಕ್ಕುಗಳಿಗಾಗಿ ಹೋರಾಟ, ಅನೇಕ ಚಳುವಳಿಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರೇ ನಿರ್ದೇಶಿಸಿ ನಟಿಸಿದ "ಝಿಕ್ರ್-ಎ-ಗಾಲಿಬ್" ಚಿತ್ರವನ್ನು ಆಗಸ್ಟ್ 13, 2016 ರಂದು ದುಬೈನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರದರ್ಶಿಸಿದ್ದಾರೆ.
ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವಾಗ ರಂಗಭೂಮಿ, ರೇಡಿಯೊ ಮತ್ತು ಚಲನಚಿತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡು 35 ವರ್ಷಗಳಿಂದ ಆಧುನಿಕ ರಂಗಭೂಮಿ, ಸಿನಿಮಾ ಚಳುವಳಿ ಮತ್ತು ರೇಡಿಯೊ, ಆಡಿಯೊ-ವಿಶುವಲ್ ಪ್ರಸಾರ ಮತ್ತು ಮಲ್ಟಿಮೀಡಿಯಾ ಪ್ರಚಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಉರ್ದು ಮತ್ತು ಹಿಂದಿಯಲ್ಲಿ ಹಲವಾರು ನಾಟಕಗಳನ್ನು ಬರೆದಿದ್ದಾರೆ. ಕಾರ್ಪೊರೇಟ್ ಉದ್ಯಮಗಳು, ಟೆಲಿ-ನಾಟಕಗಳು ಮತ್ತು ಜಾಹೀರಾತು-ಚಿತ್ರಗಳನ್ನು ಬರೆಯುವುದರ ಜೊತೆಗೆ ಚಲನಚಿತ್ರಗಳು, ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಅನಿಮೇಷನ್ ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಿದ್ದಾರೆ.
1988 ರಲ್ಲಿ 'ಕಠ್ಪುತ್ಲಿಯಾನ್ ರಂಗಭೂಮಿ ಗುಂಪು' ಹೆಸರಲ್ಲಿ ರಂಗಭೂಮಿ ಗುಂಪು ರಚಿಸಿದ್ದಾರೆ. ಪ್ರಸ್ತುತ ಇಂಡೋ-ಫ್ರೆಂಚ್ ಸಾಂಸ್ಕೃತಿಕ ಕೇಂದ್ರವಾದ ಅಲೈಯನ್ಸ್ ಫ್ರಾಂಚೈಸ್ ಡಿ ಬೆಂಗಳೂರಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಟಿಜಿ ಬ್ಯಾನರ್ ಮತ್ತು ಇತರ ರಂಗಭೂಮಿ ವೇದಿಕೆಗಳಲ್ಲಿ ಅನೇಕ ಉರ್ದು ನಾಟಕಗಳಲ್ಲಿ ನಟಿಸಿದ್ದಾರೆ. ನಟಿ ಶ್ರೀಮತಿ ಅರುಂಧತಿ ನಾಗ್ ಅವರೊಂದಿಗೆ 'ಬಿಖ್ರೆ ಬಿಂಬ್’ ನಲ್ಲಿ ಅಭಿನಯಿಸಿದ್ದಾರೆ.
"ದಿ ಡ್ರೀಮ್ಸ್ ಆಫ್ ಟಿಪ್ಪು ಸುಲ್ತಾನ್" ಇಂಗ್ಲಿಷ್ ನಾಟಕವನ್ನು ಉರ್ದು ಭಾಷೆಗೆ ಅನುವಾದಿಸಿ "ಟಿಪ್ಪು ಸುಲ್ತಾನ್ ಕೆ ಕ್ವಾಬ್" ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರ ನವೆಂಬರ್ 10 ರಂದು ವಿಧಾನ ಸೌಧದ ಬ್ಲಾಂಕ್ವೆಟ್ ಹಾಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.
‘ರಾಜ್ಯ ಸರ್ಕಾರ, ನನ್ನ ಸೇವೆ ಗುರುತಿಸಿ ಪ್ರಶಸ್ತಿಗೆಗೆ ಆಯ್ಕೆ ಮಾಡಿದ್ದಕ್ಕೆ ಋಣಿಯಾಗಿದ್ದೇನೆ‘ ಎಂದು ಜಫರ್ ಮೊಹಿದ್ದೀನ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.