ADVERTISEMENT

ಜಿ ರಾಮ್ ಜಿ ಮಸೂದೆ ವಾಪಸ್ ಪಡೆಯಲು ಸಿಪಿಐ(ಎಂಎಲ್) ಲಿಬರೇಶನ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:31 IST
Last Updated 22 ಡಿಸೆಂಬರ್ 2025, 7:31 IST
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಸಿಪಿಐ(ಎಂಎಲ್) ಲಿಬರೇಶನ್‌ ಪ್ರತಿಭಟನೆ ನಡೆಸಿದರು
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಸಿಪಿಐ(ಎಂಎಲ್) ಲಿಬರೇಶನ್‌ ಪ್ರತಿಭಟನೆ ನಡೆಸಿದರು   

ರಾಯಚೂರು: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025ನ್ನು ವಾಪಸ್ ಪಡೆಯಬೇಕು ಹಾಗೂ ಮೊದಲಿನ ಮನರೇಗಾ ಯೋಜನೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ, ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, ;ಕೇಂದ್ರದ ಬಿಜೆಪಿ ಸರ್ಕಾರ ಎಂಎನ್‌ಪಿ(ನ್ಯಾಶನಲ್ ಮಾನಿಟೈಜೇಶನ್ ಪೈಪ್‌ಲೈನ್) ಮೂಲಕ ಸಾರ್ವಜನಿಕ ಉದ್ದಿಮೆ, ಸಂಸ್ಥೆಗಳನ್ನು ಬಂಡವಾಳಿಗರಿಗೆ ಹರಾಜು ಹಾಕಿ ಜನರ ಸ್ವತ್ತನ್ನು ದೋಚಿದೆ. ಈಗ ದೇಶದ ಬಡವರು, ಮಧ್ಯಮ ವರ್ಗದವರಿಗೆ ಆಸರೆಯಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸಿ, ವಿಬಿ-ಜಿ ರಾಮ್ ಜಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ’ ಎಂದು ದೂರಿದರು.

ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್ ಮಾತನಾಡಿ, ‘ಕೂಲಿಕಾರ್ಮಿಕರು ಬಹುಕಾಲ ಹೋರಾಡಿ ಗೆದ್ದು ಪಡೆದುಕೊಂಡಿರುವ ಕಾನೂನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಾಗಿದೆ. ಅದರಲ್ಲಿ ಸುಧಾರಣೆ ತರುತ್ತೇವೆ ಎಂದು ಸುಳ್ಳು ಭರವಸೆ ನೀಡಿ, ಯೋಜನೆಯ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಅಂಶಗಳನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರ ಬಡವರ ಮೇಲೆ ಬಹಿರಂಗವಾಗಿ ದಾಳಿ ನಡೆಸಿದೆ ಎಂದು ಹೇಳಿದರು. 

ADVERTISEMENT

ಮುಖಂಡರಾದ ಆರ್.ಎಚ್ ಕಲಮಂಗಿ, ಶ್ರೀನಿವಾಸ ಬುಕ್ಕನಟ್ಟಿ, ಪಂಪಾಪತಿ, ಬೇಳಗುರ್ಕಿ, ಹುಸೇನಪ್ಪ ಅರಳಹಳ್ಳಿ, ನಿಸಾರ್ ಅಹ್ಮದ್, ಜಗದೀಶ್, ಜಲಾಲ್ ಪಾಷಾ, ಹನುಮಂತರಾಯ, ಯಲ್ಲಪ್ಪ, ಹನೀಫ್ ಅಬಕಾರಿ, ಮಹೇಶ ನಾಯಕ, ಜಿಲಾನಿ ಯರಗೇರಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.