ADVERTISEMENT

ರಾಯಚೂರು ‘ಮಕ್ಕಳ ಹಬ್ಬ’: ಉತ್ಸಾಹದ ಅಲೆ ಎಬ್ಬಿಸಿದ ಹುಂಜ, ಬೆರಗುಗೊಳಿಸಿದ ಜಾದೂ

ಚಂದ್ರಕಾಂತ ಮಸಾನಿ
Published 3 ಫೆಬ್ರುವರಿ 2026, 4:39 IST
Last Updated 3 ಫೆಬ್ರುವರಿ 2026, 4:39 IST
ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಹಿತಿ ಈರಣ್ಣ ಬೆಂಗಾಲಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಹಕ್ಕಿಗಳ ಫೋಟೊ ವೀಕ್ಷಿಸಿದ ವಿದ್ಯಾರ್ಥಿಗಳು
ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಹಿತಿ ಈರಣ್ಣ ಬೆಂಗಾಲಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಹಕ್ಕಿಗಳ ಫೋಟೊ ವೀಕ್ಷಿಸಿದ ವಿದ್ಯಾರ್ಥಿಗಳು   

ರಾಯಚೂರು: ಜಿಲ್ಲೆಯ ವಿವಿಧೆಡೆಯಿಂದ ರಾಯಚೂರಿಗೆ ಬಂದಿದ್ದ ಸಾವಿರಾರು ಮಕ್ಕಳಿಗೆ ಇಲ್ಲಿಯ ‘ಮಕ್ಕಳ ಹಬ್ಬ’ ಹೊಸ ಅನುಭವ ನೀಡಿತು.

ಮರಗಾಲಿನ ಮೇಲೆ ಬಂದ ಕೊಕ್ಕರೆ, ಗೊಂಬೆಗಳು, ಪ್ರದರ್ಶನದಲ್ಲಿನ ರೊಬೊಟಿಕ್‌ ಕೀಟಗಳು ಜೊನಾಥನ್ ಸ್ವಿಫ್ಟ್ ರಚಿತ ‘ಗಲಿವರ್ಸ್‌ ಟ್ರಾವೆಲ್ಸ್‌’ ಪುಸ್ತಕದಲ್ಲಿನ ಲೋಕವನ್ನೇ ಪ್ರವೇಶಿದಂತಾಯಿತು. ಪಕ್ಷಿ ಸಂಕುಲ, ಕೀಟ ಪ್ರಪಂಚ, ಮಣ್ಣಿನಿಂದ ಕಲಾಕೃತಿ ರಚನೆ, ಮುಖವಾಡ ತಯಾರಿಕೆ ಹೊಸ ಹುರುಪು ತುಂಬಿತು.

ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ‘ಮಕ್ಕಳ ಹಬ್ಬ’ದಲ್ಲಿ ಕಂಡು ಬಂದ ದೃಶ್ಯಗಳಿವು.

ADVERTISEMENT

ಮಕ್ಕಳು ಕ್ರೀಡಾಂಗಣ ಪ್ರವೇಶಿಸುತ್ತಿದಂತೆಯೇ 20 ಅಡಿ ಎತ್ತರದ ಕೊಕ್ಕರೆ, ಸಿಂಹ ಹಾಗೂ ಗೊಂಬೆಗಳು ತಲೆ ಬಾಗಿ ಮಕ್ಕಳನ್ನು ಸ್ವಾಗತಿಸಿದವು. ಆಕಾಶದಲ್ಲಿ ಹಾರಾಡುತ್ತಿದ್ದ ಗಾಳಿಪಟುಗಳು ಮಕ್ಕಳ ಮನಸ್ಸನ್ನು ಗಾಳಿಯಲ್ಲಿ ತೇಲಾಡಿಸಿದವು.

ಸಂಗೀತಕ್ಕೆ ಹೆಜ್ಜೆ ಹಾಕಿದ ಮಂಗಳೂರು ಹುಂಜ: 

ಎಡೆದೊರೆ ನಾಡಿನ ಮಕ್ಕಳನ್ನು ರಂಜಿಸಲು ದೂರದ ಕಡಲ ತೀರ ಮಂಗಳೂರಿನಿಂದ ಬಂದಿದ್ದ ಹುಂಜ ಗಾಂಭೀರ್ಯದೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಇಡುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮಕ್ಕಳು ಏಕಕಾಲದಲ್ಲಿ ಕೇಕೆ ಹಾಕಿ ನೃತ್ಯಕ್ಕೆ ಹುರಿದುಂಬಿಸಿದರು.

ಮಜಾ ಟಾಕೀಸ್ ಖ್ಯಾತಿಯ ಕಲಾವಿದ ಅಶೋಕ ಕೊಳಲಿ ಅವರು ಹುಂಜದ ವೇಷದಲ್ಲಿ ಸಂಗೀತಕ್ಕೆ ಹೆಜ್ಜೆ ಹಾಕಿದರು. ಈ ಹುಂಜ ರೆಕ್ಕೆಗಳ ಗರಿಬಿಚ್ಚಿಕೊಂಡು ಮೈಮನ ತಣಿಯುವಂತೆ ಕುಣಿದಾಡಿತು. ಪುಚ್ಚ ಅಲ್ಲಾಡಿಸಿ ಸಂಗೀತಕ್ಕೆ ಮೆರುಗು ತುಂಬಿತು. ಕೆಂಪು ರಕ್ತದಂಥ ಕಿರೀಟ ಹಾಗೂ ಹುಂಜದ ಗಡ್ಡ ಮಕ್ಕಳನ್ನು ಹೆಚ್ಚು ಆಕರ್ಷಿಸಿತು. 

ಚಿಣ್ಣರನ್ನು ಬೆರಗುಗೊಳಿಸಿದ ಜಾದೂ ಪ್ರದರ್ಶನ:

ಮಕ್ಕಳು ಯಾವ ಕ್ಷಣಕ್ಕಾಗಿ ಕಾಯುತ್ತಿದ್ದರೋ ಆ ಕ್ಷಣ ಬಂದೇ ಬಿಟ್ಟಿತು. ಜಾದೂಗಾರ ಕುದ್ರೋಳಿ ಗಣೇಶ ತಮ್ಮ ಕೈಚಳಕ ಪ್ರದರ್ಶಿಸುತ್ತಿದ್ದಂತೆಯೇ ಮಕ್ಕಳು ಮೂಕ ಪ್ರೇಕ್ಷಕರಾದರು.

ಒಂದೇ ಬಾಲು ತೂರುತ್ತಲ್ಲೇ ಒಂದು, ಎರಡು, ಮೂರು ಹಾಗೂ ನಾಲ್ಕು ಬಾಲುಗಳನ್ನು ಜಾದೂ ಮೂಲಕ ಪ್ರದರ್ಶಿಸಿದರು. ಸ್ಟೀಲ್‌ ರಿಂಗ್‌ಗಳ ಕ್ಷಣಾರ್ಧ ಗಂಟು ಬಿಚ್ಚಿದರು. ಪತ್ರಿಕೆಯೊಂದನ್ನು ಹರಿದು ಚಿಂದಿ ಚಿಂದಿ ಮಾಡಿ ಮತ್ತೆ ಯಥಾವತ್ತಾಗಿ ಸಿದ್ಧಪಡಿಸಿ ಮಕ್ಕಳನ್ನು ದಂಗುಗೊಳಿಸಿದರು.

ಖಾಲಿ ಪೆಟ್ಟಿಯೊಳಗಿನಿಂದ ಯುವತಿಯೊಬ್ಬಳು ಪ್ರತ್ಯಕ್ಷಳಾದರೆ, ಯುವತಿ ಇದ್ದ ಪೆಟ್ಟಿಗೆಯನ್ನೇ ಗಾಳಿಯಲ್ಲಿ ತೇಲಾಡಿಸಿದರು. ಹಗ್ಗವನ್ನು ಕೋಲಾಗಿ ಪರಿವರ್ತಿಸಿದರು. ಪ್ರತ್ಯೇಕವಾಗಿದ್ದ ಹಸಿರು, ಬಿಳಿ, ಕೇಸರಿ ಬಟ್ಟೆಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಧ್ವಜವಾಗಿ ಪರಿವರ್ತಿಸಿದರು. ನಾವೆಲ್ಲ ಒಂದು ಎನ್ನುವ ಸಂದೇಶ ಸಾರಿದರು.

ನಂತರ ವಿವಿಧ ಶಾಲೆಯ ಮಕ್ಕಳಿಂದ ಜಾನಪದ ನೃತ್ಯ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು.

 ರೊಬೊಟಿಕ್‌ ಕೀಟಗಳ ಪ್ರದರ್ಶನದಲ್ಲಿ ಗಮನ ಸೆಳೆದ ಕೀಟ (ಚಿಡ್ಡಾ)
ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾರಾಡಿದ ಗಾಳಿ ಪಟ
ಮಳಿಗೆಯೊಂದರಲ್ಲಿ ಹಕ್ಕಿಗೂಡು ಸಿದ್ಧಪಡಿಸಿದ ಶಿಕ್ಷಕಿಯರು
ಹಳ್ಳಿಯ ಮಕ್ಕಳು ಮೊದಲ ಬಾರಿಗೆ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದೇವೆ. ಜಿಲ್ಲಾಡಳಿತ ಒಳ್ಳೆಯ ವ್ಯವಸ್ಥೆ ಮಾಡಿದ್ದು ಖುಷಿ ತಂದಿದೆ
ಬಿಂದುಶ್ರೀ ದೇವಸುಗೂರು ಪ್ರೌಢಶಾಲೆಯ ವಿದ್ಯಾರ್ಥಿನಿ

ಮಕ್ಕಳಿಂದ ನೃತ್ಯ ಪ್ರದರ್ಶನ

ರಾಘವ ನಾಟ್ಯಾಮೃತ ಶಾಲೆ ಮಕ್ಕಳು ಭರತನಾಟ್ಯ ಸೇಂಟ್ ಮೇರಿ ಕಾನ್ವೆಂಟ್ ಶಾಲೆ ಮಕ್ಕಳು ಜಾನಪದ ನೃತ್ಯ ಗಬ್ಬೂರಿನ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಜಂಪ್ ರೋಪ್ ಮತ್ತು ಮಲ್ಲಕಂಬ ಮಲ್ಲಟದ ಕೆ.ಜಿ.ಬಿ.ವಿ. ಶಾಲೆಯಿಂದ ಕರಾಟೆ ಪಿರಾಮಿಡ್ ರಾಯಚೂರಿನ ಜ್ಞಾನಗಂಗಾ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಮ್ಯಾಕ್ಸ್‌ವೆಲ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮಕ್ಕಳು ಭರತನಾಟ್ಯ ಸೇಂಟ್ ಜೇವಿಯರ್ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಲಯನ್ಸ್ ಪ್ರೌಢಶಾಲೆ ಮಕ್ಕಳು ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

‘ಜ್ಞಾನ ಸಂಪಾದನೆಗೆ ಅವಕಾಶ’

ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಕ್ಕಳೊಂದಿಗೆ ದೀಪ ಬೆಳಗಿಸಿ ಹಬ್ಬಕ್ಕೆ ಚಾಲನೆ ನೀಡಿ ‘ಜಿಲ್ಲೆಯ ಜನರ ಸಂಘ–ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳ ಸಹಕಾರ ಹಾಗೂ ಪರಿಶ್ರಮದಿಂದ ಮಕ್ಕಳ ಹಬ್ಬ ನಡೆಯುತ್ತಿದೆ. ಮನರಂಜನೆ ಜೊತೆಗೆ ಜ್ಞಾನ ಸಂಪಾದನೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ‘ಮಕ್ಕಳ ಹಬ್ಬವು ಜಿಲ್ಲೆಯಲ್ಲಿ ವಿನೂತನವಾಗಿ ನಡೆಯುತ್ತಿದೆ. ಮಕ್ಕಳ ಹಬ್ಬ ಅಧಿಕಾರಿಗಳಲ್ಲೂ ಸ್ಪೂರ್ತಿ ತುಂಬಿದೆ’ ಎಂದು ಬಣ್ಣಿಸಿದರು. ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ ‘ಮಕ್ಕಳನ್ನು ರಂಜಿಸಲು ಅವರ ಸ್ಮೃತಿಪಟಲದಲ್ಲಿ ಉಳಿಯುವಂತಹ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಉಪ ವಿಭಾಗಾದಿಕಾರಿ ಡಾ.ಹಂಪಣ್ಣ ಸಜ್ಜನ ತಹಶೀಲ್ದಾರ್ ಸುರೇಶ ವರ್ಮಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಕೇಶವರಾವ್ ರೆಡ್ಡಿ ಮುರಳೀಧರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಿ ಉಪಸ್ಥಿತರಿದ್ದರು. ರೇಸ್ ಕಾನ್ಸೆಫ್ಟ್‌ ಶಾಲೆಯ ತನ್ವಿ ನಾಯಕ ಹಾಡಿದರು. ವೈ.ಕೆ.ಯಶೋಧಾ ಅವರು ನಿರೂಪಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಊಟದ ವ್ಯವಸ್ಥೆ

ರಾಯಚೂರು ಜಿಲ್ಲೆಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸುಮಾರು ಆರು ಸಾವಿರ ಮಕ್ಕಳಿಗೆ ಹುಗ್ಗಿ ಹಾಗೂ ಬಿಸಿಬೇಳೆ ಬಾತ್‌ನ ವ್ಯವಸ್ಥೆ ಮಾಡಿದ್ದರು. ಹಲವು ಕಡೆ ಕೌಂಟರ್‌ ತೆಗೆದಿದ್ದರಿಂದ ಮಕ್ಕಳು ಸರತಿ ಸಾಲಿನಲ್ಲಿ ಸುಲಭವಾಗಿ ಬಂದು ಊಟ ಮಾಡಿದರು. ಅಧಿಕಾರಿಗಳು ಸಹ ಇಲ್ಲಿಯೇ ಊಟ ಮಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಶುದ್ಧ ಕುಡಿಯುವ ನೀರು ಹಾಗೂ ಕೈ ತೊಳೆಯಲು ಪ್ರತ್ಯೇಕ ನಳಗಳ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮಕ್ಕಳು ಉತ್ಸಾಹದಿಂದ ಹಬ್ಬದಲ್ಲಿ ಪಾಲ್ಗೊಂಡು ಸಂಜೆ ಸಂತಸದ ಕ್ಷಣದೊಂದಿಗೆ ಮನೆಗಳತ್ತ ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.