ಲಿಂಗಸುಗೂರು: ‘ಈಗಾಗಲೇ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಉಪ ವಿಭಾಗಾಧಿಕಾರಿ ಅವಿನಾಶ ಶಿಂಧೆ ಅವರಿಗೆ ಸಲ್ಲಿಸಿದರು.
‘ರಾಜ್ಯವ್ಯಾಪಿ 6 ಲಕ್ಷ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆ ನಮ್ಮದಾಗಿದೆ. ಪ್ರಕೃತಿ ವಿಕೋಪ, ಪ್ರವಾಹ, ಕೋವಿಡ್‍ನಂಥ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಜನ ಸಾಮಾನ್ಯರ ಕಲ್ಯಾಣ, ರಾಜ್ಯ ಸರ್ಕಾರದ ಯೋಜನೆಗಳನ್ನು ಸಾಮಾನ್ಯರಿಗೆ ತಲುಪಿಸುವಲ್ಲಿ ನಮ್ಮ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಬಂದಿದ್ದೇವೆ’ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
‘ಸಂಕಷ್ಟದಲ್ಲಿ ಆರ್ಥಿಕ ನೆರವು, ಕಡಿಮೆ ನೌಕರರಿದ್ದರೂ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಜೊತೆಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಾಲ್ಲೂಕು ಘಟಕ ಅಧ‍್ಯಕ್ಷ ಹಾಜಿಬಾಬು ಕಲ್ಯಾಣಿ, ಪ್ರಧಾನ ಕಾರ್ಯದರ್ಶಿ ಗುರುಸಂಗಯ್ಯ ಗಣಾಚಾರಿ, ಮುಖಂಡರಾದ ಭೀಮಣ್ಣ ನಾಯಕ, ಶರಣಪ್ಪ ಸಾಹುಕಾರ, ಅಮರೇಶಪ್ಪ ಹೂನೂರು, ಡಾ.ರುದ್ರಗೌಡ ಪಾಟೀಲ, ಹನುಮಂತರಾವ್, ಸೋಮಶೇಖರ ನಾಡಗೌಡ್ರ, ಶಿವಪುತ್ರ ಬೆಳ್ಳಿಗನೂರು, ಮಂಜುನಾಥ ಪೂಜಾರಿ, ಪ್ರಭುಲಿಂಗ ಗದ್ದಿ, ಬಸಪ್ಪ ಹಂದ್ರಾಳ, ಚಾರ್ಲೆಸ್, ರಮೇಶ ಸಾಲಗುಂದಿ, ಸಾವಿತ್ರಮ್ಮ, ಶಾರದಾ, ನಾಗರತ್ನ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.