ಸಿಂಧನೂರು: ‘ಸಂಚಾರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವೆಂಕಟೇಶ ಚವ್ಹಾಣ್ ಅವರು ವಾಹನಗಳನ್ನು ತಡೆದು ದಾಖಲಾತಿ ಕೇಳುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ವಾಹನಗಳನ್ನು ಹಿಡಿದು ದಂಡ ಕಟ್ಟು ಇಲ್ಲ ₹200, ₹300 ಕೊಟ್ಟು ಹೋಗು ಎಂದು ಕೇಳುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಮೇಲಧಿಕಾರಿಗಳು, ಶಾಸಕರಿಗೆ ಮಾಮೂಲು ಕೊಡಬೇಕು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಎಪಿಎಂಸಿ, ಕುರಿ ಮತ್ತು ದನದ ಸಂತೆಗೆ ಬರುವ ರೈತರಿಂದ ಹಣ ವಸೂಲಿ ಮಾಡಿ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಪಿಎಸ್‍ಐ ವೆಂಕಟೇಶ ಚವ್ಹಾಣ್ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
ಕಾಡಾ ಅಧ್ಯಕ್ಷ ರಾಜೀನಾಮೆ ನೀಡಲಿ: ಕಳೆದ ವರ್ಷ ಒಂದೇ ಬೆಳೆ ಬೆಳೆದು ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾದ್ದರಿಂದ ಎರಡು ಬೆಳೆ ಬೆಳೆಯಬಹುದು ಎಂದು ಸಂತಸಗೊಂಡಿದ್ದರು. ಆದರೆ ಈಗ 19ನೇ ಕ್ರಸ್ಟ್ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಬರ ಸಿಡಿಲು ಬಡಿದಂತಾಗಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ. ಕಾಡಾ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿ ಸಿದರು.
ನದಿಪಾತ್ರದ ಜಮೀನುಗಳು ಜಲಾವೃತವಾಗಲಿದ್ದು, ರೈತರಿಗೆ ಸರ್ಕಾರ ಪರಿಹಾರ ಘೋಷಿಸಬೇಕು. ಕೃಷಿ ಚಟುವಟಿಕೆಗೆ ಮಾಡಿದ ಸಾಲ ಮನ್ನಾ ಮಾಡಬೇಕು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಮಾರಲದಿನ್ನಿ, ಮುಖಂಡರಾದ ಬಸವರಾಜ ಸುಲ್ತಾನಪುರ, ಚಿನ್ನಪ್ಪ ಗುಂಜಳ್ಳಿ ಹಾಗೂ ಯಮನಪ್ಪ ಪಗಡದಿನ್ನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.