ADVERTISEMENT

ನೈಜ ಉದ್ದೇಶಕ್ಕಾಗಿ ಶಾಲೆಗಳನ್ನು ಬಲಪಡಿಸಿ

ಎಸ್‌ಎಫ್‌ಐ ಜಿಲ್ಲಾ ಸಮಾವೇಶದಲ್ಲಿ ರಾಜ್ಯ ಘಟಕದ ಅಧ್ಯಕ್ಷ ವಿ.ಅಮರೇಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 18:30 IST
Last Updated 18 ಜುಲೈ 2019, 18:30 IST
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಎಫ್‌ಐ ಜಿಲ್ಲಾ ಸಮಾವೇಶದಲ್ಲಿ ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಮರೇಶ ಮಾತನಾಡಿದರು
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಎಫ್‌ಐ ಜಿಲ್ಲಾ ಸಮಾವೇಶದಲ್ಲಿ ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಮರೇಶ ಮಾತನಾಡಿದರು   

ರಾಯಚೂರು: ಶಿಕ್ಷಣ ವ್ಯವಸ್ಥೆ ಸಂಪೂರ್ಣ ವ್ಯಾಪಾರೀಕರಣಗೊಂಡಿದ್ದು, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರವು ನೈಜ ಉದ್ದೇಶ ಇಟ್ಟುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ವಿ.ಅಮರೇಶ ಒತ್ತಾಯಿಸಿದರು.

ನಗರದ ಕನ್ನಡ ಭವನದಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದಿಂದ ‘ರಾಯಚೂರು ವಿಶ್ವವಿದ್ಯಾಲಯ ಬಲವರ್ಧನೆಗಾಗಿ, 371 ಜೆ ಕಲಂ ಸಮರ್ಪಕ ಜಾರಿಗೆ, ಸಮಗ್ರ ಶೈಕ್ಷಣಿಕ ಅಭಿವೃದ್ಧಿ’ಗೆ ಒತ್ತಾಯಿಸಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಡಿಮೆ ವಿದ್ಯಾರ್ಥಿಗಳ ದಾಖಲಾತಿಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚಲಾಗುತ್ತಿದೆ. ಶಿಕ್ಷಣದಲ್ಲಿ ಖಾಸಗೀಕರಣ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣವನ್ನು ವ್ಯಾಪಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಒಡ್ಡುವಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿರುವುದು ಶ್ಲಾಘನೀಯವಾಗಿದೆ. ಆದರೆ, ಪ್ರಾಥಮಿಕ ಶಿಕ್ಷಣದ ಬಲವರ್ಧನೆಯ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಮೊದಲು ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕು ಎಂದರು.

ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬರಗಾಲ, ರೈತರ ಆತ್ಮಹತ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದರೆ ಶಾಸಕರು ರೇಸಾರ್ಟ್‌ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಅಥವಾ ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಡಬೇಕಾದ ಶಾಸಕರು ಸ್ವಾರ್ಥ ಸಾಧನೆಗಾಗಿ ಅಪರಾಧ ಮಾಡಿದ ಆರೋಪಿಗಳು ತಲೆಮರೆಸಿಕೊಂಡಂತೆ ಶಾಸಕರು ತಲೆಮರೆಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ ಮಾತನಾಡಿ, ಸಂವಿಧಾನದ 371 ಜೆ ಕಾಯ್ದೆ ಅನುಷ್ಠಾನದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಈ ಕಾಯ್ದೆ ಜಾರಿಗಿಂತ ಮುಂಚಿನ ಸಮಯದಲ್ಲಿ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯೇ ದೊರೆಯುತ್ತಿರಲಿಲ್ಲ. ದೊರೆತರೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ದೊರೆಯುತ್ತಿತ್ತು. ಕಾಯ್ದೆ ಜಾರಿಯಾದ ನಂತರ ಈ ಭಾಗದ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ದೊರೆಯುತ್ತಿರುವುದರಿಂದ ಪರಿಸ್ಥಿತಿ ಬದಲಾಗಿದೆ ಎಂದರು.

ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರೆಯುತ್ತಿದೆ. ಇನ್ನೂ ಕೆಲ ಕಾಲೇಜುಗಳಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾದ ಸ್ಥಾನಗಳು ಭರ್ತಿಯಾಗದೇ ಉಳಿಯುತ್ತಿವೆ. ರಾಯಚೂರು ವಿಶ್ವವಿದ್ಯಾಲಯ ತ್ವರಿತವಾಗಿ ಆರಂಭವಾಗಬೇಕು. ಇದಕ್ಕಾಗಿ ಪ್ರಯತ್ನ ನಡೆಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಹೆಚ್ಚಾದಂತೆ ಅವಕಾಶಗಳು ಹೆಚ್ಚಾಗಿ ದೊರೆಯಲಿವೆ ಎಂದು ತಿಳಿಸಿದರು.

ಕಾಯ್ದೆ ಅನುಷ್ಠಾನ ಮಾಡುವಾಗ ಸಮಸ್ಯೆಗಳು ಬರುತ್ತವೆ. ಅಂತಹ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದುವರೆಯಬೇಕು. ಅಂದಾಗ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಕೆ.ಜಿ.ವೀರೇಶ, ಶಬ್ಬೀರ ಜಾಲಹಳ್ಳಿ, ಗಿರಿಧರ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.