
ಲಿಂಗಸುಗೂರು: ‘ಜಾತಿ-ಧರ್ಮಗಳ ನಡುವೆ ದಿನದಿಂದ ದಿನಕ್ಕೆ ಸಂಘರ್ಷ, ವೈಷಮ್ಯ ಮತ್ತು ಅಸೂಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಮುದಾಯಗಳು ಶಾಂತಿ ಮತ್ತು ಸಹಿಷ್ಣುತೆಯಿಂದ ಬದುಕಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಯಲಗಲದಿನ್ನಿ ಗ್ರಾಮದಲ್ಲಿ ಶನಿವಾರ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ನೂತನ ದೇವಾಲಯದ ಶಿಲಾಮಂಟಪ ಉದ್ಘಾಟನೆ ಹಾಗೂ ನಾಗಸಿಂಹಾಸನ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
‘ಭಾರತ ದೇಶ ಆಧ್ಯಾತ್ಮದ ತವರೂರು. ಈ ಪವಿತ್ರ ನಾಡಿನಲ್ಲಿ ಹಲವಾರು ಧರ್ಮಗಳು ಮತ್ತು ಸಂಪ್ರದಾಯಗಳು ಬೆಳೆದುಕೊಂಡು ಬಂದಿವೆ. ಆಧ್ಯಾತ್ಮದ ಜ್ಞಾನದಿಂದ ಮಾನವನ ಬದುಕಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುವುದು’ ಎಂದರು.
‘ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮದ ಆಚರಣೆ ಮುಖ್ಯ. ಅರಿವು, ಆದರ್ಶಗಳಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳಬೇಕಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮ ಜ್ಞಾನ ಕರ್ಮ ಸಮುಚ್ಚಯದಿಂದ ಕೂಡಿದೆ’ ಎಂದು ಹೇಳಿದರು.
‘ಅರಿವಿದ್ದರೆ ಸಾಲದು. ಅದರೊಂದಿಗೆ ಆಚರಣೆಯೂ ಮುಖ್ಯ. ಯಲಗಲದಿನ್ನಿ ಗ್ರಾಮದಲ್ಲಿ ಮಾತಾ ಮಾಣಿಕೇಶ್ವರಿ ಆಶ್ರಮ ಪ್ರಗತಿ ಹೊಂದುತ್ತಿದೆ. ಅಡ್ಡಿ ಆತಂಕಗಳು ಎದುರಾದರೆ ಅಂಥ ಪರಿಸ್ಥಿತಿಯಲ್ಲಿ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಮಾತೆ ನಂದಿಕೇಶ್ವರಿ ಅವರ ಜೊತೆ ನಿಲ್ಲುವ ಮೂಲಕ ಸಹಕಾರ ನೀಡಬೇಕು’ ಎಂದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ,‘ಇಂದಿನ ದಿನಮಾನಗಳಲ್ಲಿ ಕೆಲವರು ಜಾತಿ–ಜಾತಿಗಳ ನಡುವೆ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಜಾಗೃತರಾಗಬೇಕು. ಸನಾತನ ಧರ್ಮವನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮವಹಿಸಬೇಕು’ ಎಂದು ಹೇಳಿದರು.
ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ,‘ರಾಜಕಾರಣದಲ್ಲಿ ಧರ್ಮ ಇರಬೇಕೆ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ಇದರಿಂದ ಧರ್ಮಕ್ಕೆ ಕುಂದು ತರುವ ಕೆಲಸವಾಗುತ್ತಿದೆ’ ಎಂದರು.
ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಸ್ವಾಮೀಜಿ, ಮಸ್ಕಿ ಗಚ್ಚಿನ ಮಠದ ರುದ್ರಮುನಿ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ದೇವರಭೂಪುರಿನ ಗಜದಂಡ ಶಿವಾಚಾರ್ಯರು, ಸಿಂಧನೂರಿನ ಸೋಮನಾಥ ಸ್ವಾಮೀಜಿ, ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಮಾತಾ ಮಾಣಿಕೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.