ADVERTISEMENT

ರಾಯಚೂರು: ಜೇಷ್ಠತೆ ಪಟ್ಟಿ ಪ್ರಕಟಿಸಲು ಆಗ್ರಹ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:54 IST
Last Updated 23 ಸೆಪ್ಟೆಂಬರ್ 2020, 3:54 IST
ರಾಯಚೂರಿನಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಟಿಪ್ಪುಸುಲ್ತಾನ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಟಿಪ್ಪುಸುಲ್ತಾನ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಗ್ರಾಮ ಪಂಚಾಯಿತಿಗಳಲ್ಲಿ 10 ವರ್ಷ ಪೂರ್ಣ ಸೇವೆ ಸಲ್ಲಿಸಿದ ಕರವಸೂಲಿಗಾರರ ಜೇಷ್ಠತ ಪಟ್ಟಿ ಪ್ರಕಟಿಸಬೇಕು. ಬಾಕಿ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ನೌಕರರು ಸ್ವಚ್ಛತೆ, ಕುಡಿಯುವ ನೀರು ಸೀಲ್ ಡೌನ್ ಇತ್ಯಾದಿ ಕೆಲಸ ಮಾಡುತ್ತಾ ವಾರಿಯರ್ಸ್ ಆಗಿದ್ದರು. ಹಲವು ವರ್ಷಗಳಿಂದ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ವೇತನ ಪಾವತಿಯ ಸಂಬಂಧ ಹಲವಾರು ಆದೇಶಗಳನ್ನು ಸರ್ಕಾರ ಹೊರಡಿಸಿದರೂ ಜಾರಿಯಾಗುತ್ತಿಲ್ಲ. ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಬಿಲ್ ಕಲೆಕ್ಟರ್, ಗುಮಾಸ್ತ್‌, ಕಂಪ್ಯೂಟರ್‌ ಆಪರೇಟರಗಳಿಗೆ ₹14,115, ಪಂಪ್‌ ಆಪರೇಟರ್‌ಗಳಿಗೆ ₹12,281, ಸಿಪಾಯಿ ಜವಾನರಿಗೆ ₹11,703 ಮತ್ತು ಸ್ವಚ್ಚತೆ ಸಿಬ್ಬಂದಿಗೆ ₹14,563 ವೇತನ ಜಾರಿ ಮಾಡಬೇಕು. ಬಾಕಿ ವೇತನ ತೆರಿಗೆ ಸಂಗ್ರಹದಲ್ಲಿ 14 ನೇ ಹಾಗೂ 15 ನೇ ಹಣಕಾಸು ಆಯೋಗದ ಹಣದಲ್ಲಿ ಉಳಿದ ಸಿಬ್ಬಂದಿ ವೇತನ ಪಾವತಿಸುವಂತಾಗಬೇಕು ಎಂದು ಮನವಿ ಮಾಡಿದರು.

ADVERTISEMENT

ನಿವೃತ್ತಿಯಾದವರಿಗೆ 15 ತಿಂಗಳು ಗ್ರಾಚ್ಯುಟಿ ನೀಡಬೇಕು.ಇಎಫ್‌ಎಂಎಸ್ ಬಾಕಿ ಉಳಿದ ಕಸಗೂಡಿಸುವ ಮತ್ತು ಪಂಪ್ ಆಪರೇಟರ್ ಹಾಗೂ ಇತರೆ ಸಿಬ್ಬಂದಿಯನ್ನು ಸರ್ಕಾರದ ಆದೇಶದಂತೆ ಸೇರ್ಪಡೆ ಮಾಡಬೇಕು. 23-2019ರ ಆದೇಶದಂತೆ ಎಲ್ಲಾ ಸಿಬ್ಬಂದಿಯನ್ನು ಅನುಮೋದನೆ ಮಾಡಬೇಕು.

ಬಿಲ್‌ಕಲೆಕ್ಟರ್ ಅವರಿಗೆ ಗ್ರೇಡ್ -2 ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಸರ್ಕಾರಿ ಆದೇಶಗಳನ್ನು ಜಾರಿ ಮಾಡದ ಪಿಡಿಓ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಯುಟಿಐ ರಾಜ್ಯ ಕಾರ್ಯದರ್ಶಿ ಶರಣಬಸವ, ಕೆ.ನಾರಾಯಣ, ಆರ್.ಎಸ್.ಬಸವರಾಜ, ಅಶೋಕ್, ಮಲ್ಲಿಕಾರ್ಜುನ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.