ADVERTISEMENT

ಸಿಂಧನೂರು: ಕೃಷಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 14:54 IST
Last Updated 13 ಆಗಸ್ಟ್ 2021, 14:54 IST
ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದವು
ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದವು   

ಸಿಂಧನೂರು: ಜನವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಗುರುವಾರ ತಾಲ್ಲೂಕಿನ ಗುಂಜಳ್ಳಿ ಮತ್ತು ಕಲಮಂಗಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನಾ ಧರಣಿ ನಡೆಸಿದವು.

ರೈತರ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಪಡಿಸಬೇಕು. ರಾಜ್ಯ ಸರ್ಕಾರ ಶ್ರೀಮಂತರಿಗೆ ಅನುಕೂಲ ಆಗುವಂತೆ ಭೂ ಸುಧಾರಣೆ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು. ಭೂಮಿ ಇಲ್ಲದ ಬಡವರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗೆ ಸಾಗುವಳಿ ಚೀಟಿ ನೀಡಿ ಸಕ್ಷಮಗೊಳಿಸಬೇಕು. ನಿವೇಶನ ರಹಿತರಿಗೆ ನಿವೇಶನ, ವಸತಿ ಹಂಚಿಕೆ ಮಾಡಲು ಸಮಗ್ರ ಯೋಜನೆ ಘೋಷಣೆ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ಸರಕುಗಳ ಬೆಲೆ ಏರಿಕೆ ನಿಯಂತ್ರಿಸಬೇಕೆಂದು ಎಐಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಾಷುಮಿಯ ಒತ್ತಾಯಿಸಿದರು.

ದಿನಗೂಲಿ, ಗುತ್ತಿಗೆ, ಯೋಜನೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಸುರಕ್ಷಾ ಮತ್ತು ಪಿಂಚಣಿ ಖಾತ್ರಿ ಪಡಿಸಬೇಕು. ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಲಾದ ಆಹಾರ ಕಿಟ್, ಟೂಲ್ ಕಿಟ್‍ಗಳ ಅವ್ಯವಹಾರ ತನಿಖೆಗೊಳಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ ₹ 600 ಕೂಲಿಯಂತೆ ಕನಿಷ್ಠ 200 ದಿನಗಳ ಕೆಲಸ ಖಾತ್ರಿ ಪಡಿಸಬೇಕು. ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಅಂಗೀಕರಿಸಬೇಕು. ಲಾಕ್‍ಡೌನ್ ಸಂದರ್ಭದಲ್ಲಿ ತೊಂದರೆಗೊಳಪಟ್ಟ ಹಮಾಲರು, ಕಟ್ಟಡ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ₹ 10 ಸಾವಿರ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಅಂಗನವಾಡಿ ಫೆಡರೇಶನ್ ರಾಜ್ಯ ಸಮಿತಿ ಸದಸ್ಯ ತಿಪ್ಪಯ್ಯಶೆಟ್ಟಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ ಸುಕಾಲಪೇಟೆ, ಹಮಾಲರ ಸಂಘದ ಅಧ್ಯಕ್ಷ ಮರಿಯಪ್ಪ ಮಜ್ಜಿಗಿ, ಮುಖಂಡರಾದ ಲಾಲಸಾಬ, ಗಂಗಾಧರ್, ವಜ್ರಮ್ಮ, ನಾಗವೇಣಿ, ಬಸಪ್ಪ, ಯಂಕಣ್ಣ, ಶ್ಯಾಮಣ್ಣ, ದೇವಣ್ಣ, ಪಂಪಾಪತಿ, ವೀಣಾ, ಶಿವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.